ದೆಹಲಿ ಅಬಕಾರಿ ಅಕ್ರಮದ ಸತ್ಯ ಅರವಿಂದ್ ಕೇಜ್ರಿವಾಲ್ ನಾಳೆ ಬಹಿರಂಗ ಪಡಿಸ್ತಾರೆ: ಪತ್ನಿ ಸುನಿತಾ

Krishnaveni K

ಬುಧವಾರ, 27 ಮಾರ್ಚ್ 2024 (13:20 IST)
Photo Courtesy: Twitter
ನವದೆಹಲಿ: ದೆಹಲಿ ಅಬಕಾರಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸತ್ಯವೇನೆಂದು ನಾಳೆ ಬಹಿರಂಗಪಡಿಸಲಿದ್ದಾರೆ ಎಂದು ಅವರ ಪತ್ನಿ ಸುನಿತಾ ಹೇಳಿಕೆ ನೀಡಿದ್ದಾರೆ.

ಪತಿ ಕೇಜ್ರಿವಾಲ್ ಅರೆಸ್ಟ್ ಆದ ಬಳಿಕ ಸುನಿತಾ ಮತ್ತೊಮ್ಮೆ ಪತಿ ಪರವಾಗಿ ಸಂದೇಶ ನೀಡಿದ್ದಾರೆ. ಇದಕ್ಕೆ ಮೊದಲು ಬಿಜೆಪಿಯವರು ನಮ್ಮ ಸಹೋದರರಿದ್ದಂತೆ. ಅವರನ್ನು ಧ್ವೇಷಿಸಬೇಡಿ ಎಂದು ಸಂದೇಶ ನೀಡಿದ್ದರು. ಇದೀಗ ಮತ್ತೊಮ್ಮೆ ಪತಿ ಪರವಾಗಿ ಮಾತನಾಡಿದ್ದಾರೆ.

‘ಎರಡು ದಿನಗಳ ಹಿಂದೆ ಕೇಜ್ರಿವಾಲ್ ತಮ್ಮ ಸಚಿವರಿಗೆ ಪತ್ರ ಬರೆದು ದೆಹಲಿಯ ಸಮಸ್ಯೆಗೆ ಪರಿಹಾರ ನೀಡಲು ಆದೇಶಿಸಿದ್ದರು. ಆದರೆ ಇದರ ವಿರುದ್ಧ ಬಿಜೆಪಿ ದೂರು ನೀಡಿತ್ತು. ಜನರ  ಸಮಸ್ಯೆಗೆ ಸ್ಪಂದಿಸುವುದೂ ತಪ್ಪೇ? ಇದರ ಬಗ್ಗೆ ಕೇಜ್ರಿವಾಲ್ ರಿಗೆ ತುಂಬಾ ನೋವಾಯಿತು. ಇನ್ನು, ಇವರೆಲ್ಲಾ ಹೇಳುವ ಅಬಕಾರಿ ಅಕ್ರಮದ ಬಗ್ಗೆ ಕೇಜ್ರಿವಾಲ್ ನಾಳೆ ಕೋರ್ಟ್ ಗೆ ಸಕಲ ವಿವರಗಳನ್ನು ನೀಡಲಿದ್ದಾರೆ. ಇಡಿ ಅಧಿಕಾರಿಗಳು ಇದುವರೆಗೆ 250 ಕಡೆ ದಾಳಿ ಮಾಡಿದ್ದಾರೆ. ಆದರೆ ಅವರೇ ಆರೋಪಿಸುವಂತೆ ಇದುವರೆಗೆ ಅವರಿಗೆ ಹಣ ಸಿಕ್ಕಿಲ್ಲ. ಅಬಕಾರಿ ಅಕ್ರಮದ ಹಣ ನಿಜವಾಗಿಯೂ ಎಲ್ಲಿಗೆ ಸಂದಾಯವಾಗಿತ್ತು ಎಂಬುದನ್ನು ಕೇಜ್ರಿವಾಲ್ ನಾಳೆ ವಿವರವಾಗಿ ಹೇಳಲಿದ್ದಾರೆ’ ಎಂದು ಸುನಿತಾ ಹೇಳಿದ್ದಾರೆ.

ದೆಹಲಿ ಅಬಕಾರಿ ಅಕ್ರಮ ಹಗರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಮೊನ್ನೆಯಷ್ಟೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ನಾಳೆ ಅವರ ಕಸ್ಟಡಿ ಮುಕ್ತಾಯವಾಗಲಿದೆ. ಹೀಗಾಗಿ ನಾಳೆ ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ