ವಯನಾಡು: ವಯನಾಡು ಗುಡ್ಡ ಕುಸಿತದ ಬಗ್ಗೆ ಒಂದೊಂದೇ ಕತೆಗಳು ಹೊರಬೀಳುತ್ತಿವೆ. ಪ್ರವಾಹದಲ್ಲಿ ಈಜಿ ಪವಾಡಸದೃಶವಾಗಿ ಬಚಾವ್ ಆದ ಅಜ್ಜಿ ಮತ್ತು ಕುಟುಂಬದ ಕತೆ ರೋಚಕವಾಗಿದೆ.
ಗುಡ್ಡ ಕುಸಿತದಿಂದಾಗಿ ಪ್ರವಾಹ ಮನೆಗೆ ನುಗ್ಗಿ ಬಂದಾಗ ಓರ್ವ ಅಜ್ಜಿ ತನ್ನ ಮಗಳು, ಅಳಿಯ ಮತ್ತು ಮೊಮ್ಮಗನೊಂದಿಗೆ ಪ್ರವಾಹದಲ್ಲಿ ಈಜಿ ಗುಡ್ಡವೊಂದನ್ನು ತಲುಪಿದ್ದರು. ಈ ವೇಳೆ ಅವರೆಲ್ಲರಿಗೂ ಮೈಯೆಲ್ಲಾ ಗಾಯವಾಗಿತ್ತು. ಆದರೂ ಪ್ರಾಣಕ್ಕೆ ತೊಂದರೆಯಿರಲಿಲ್ಲ.
ಅಂತೂ ಸುರಕ್ಷಿತ ಸ್ಥಳಕ್ಕೆ ಬಂದೆವು ಎಂದು ನಿಟ್ಟುಸಿರಿಟ್ಟರೆ ಎದುರಿಗೆ ಕಾಡಾನೆಯಿತ್ತು. ಕಾಡಾನೆಗಳು ಮನುಷ್ಯರನ್ನು ಕಂಡರೆ ಹಿಂದೆ ಮುಂದೆ ನೋಡದೇ ತುಳಿದು ಹಾಕುತ್ತವೆ. ಹೀಗಾಗಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿತ್ತು ಅಜ್ಜಿ ಮತ್ತು ಮಕ್ಕಳ ಕತೆ. ಆದರೆ ಕಾಡಾನೆಯ ಮುಂದೆ ನಿಂತ ಅಜ್ಜಿ ಕೈ ಮುಗಿದು ಹೇಗೋ ಕಷ್ಟಪಟ್ಟು ಬಹುದೊಡ್ಡ ದುರಂತದಿಂದ ಪಾರಾಗಿ ಬಂದಿದ್ದೇವೆ. ದಯವಿಟ್ಟು ನಮಗೆ ತೊಂದರೆ ಮಾಡಬೇಡ ಎಂದು ಕೈ ಮುಗಿದು ಕೇಳಿದರಂತೆ. ಅಜ್ಜಿ ಕಣ್ಣೀರು ಸುರಿಸುತ್ತಿರುವುದನ್ನು ನೋಡಿ ಆನೆಗೂ ಕಣ್ಣಲ್ಲಿ ನೀರು ಬಂತಂತೆ.
ವಿಶೇಷವೆಂದರೆ ಆ ಆನೆಯ ಕಾಲಬುಡದಲ್ಲೇ ಮಳೆಯಲ್ಲಿ ಅಜ್ಜಿ, ಮೊಮ್ಮಗಳು ಮಲಗಿ ರಾತ್ರಿ ಕಳೆದಿದ್ದಾರೆ. ಬಳಿಕ ಯಾರೋ ಬಂದು ರಕ್ಷಣೆ ಮಾಡುವವರೆಗೂ ಆ ಆನೆ ಅವರಿಗೆ ಏನೂ ಮಾಡಲಿಲ್ಲವಂತೆ. ಆ ದೇವರೇ ಆನೆಯ ರೂಪದಲ್ಲಿ ಬಂದು ನಮ್ಮನ್ನು ರಕ್ಷಣೆ ಮಾಡಿದ್ದಾರೆ ಎಂದು ಅಜ್ಜಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರು ಹೇಳಿದ ಈ ಅನುಭವದ ಕತೆ ಈಗ ವೈರಲ್ ಆಗಿದೆ.