ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ: ಅದಾನಿಯನ್ನು ಹಿಂದಿಕ್ಕಿದ ಅಂಬಾನಿ

Sampriya

ಬುಧವಾರ, 3 ಏಪ್ರಿಲ್ 2024 (16:01 IST)
Photo Courtesy Facebook
ಮುಂಬೈ: 2024ರ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಈ ಪಟ್ಟಿಯಲ್ಲಿ 169 ರಿಂದ 200 ಭಾರತೀಯರು ಗುರುತಿಸಿಕೊಂಡಿದ್ದು, ಈ ಬಾರಿ ಹೆಚ್ಚುವರಿಯಾಗಿ 25 ಮಂದಿ ಗುರುತಿಸಿಕೊಂಡಿದ್ದಾರೆ.

ವಿಶೇಷವೆಂದರೆ ವಿಶ್ವದ ಬಿಲಿಯನೇರ್ ಪಟ್ಟಿಯಲ್ಲಿ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿಯನ್ನುಮುಕೇಶ್ ಅಂಬಾನಿ  ಹಿಂದಿಕ್ಕಿದ್ದಾರೆ. ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು 83 ಶತಕೋಟಿ ಡಾಲರ್ ನಿಂದ ಈ ಬಾರಿ 116 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಈ ಮೂಲಕ 100 ಶತಕೋಟಿ ಡಾಲರ್ ಕ್ಲಬ್‌ಗೆ ಪ್ರವೇಶಿಸಿದ ಮೊದಲ ಏಷ್ಯಾದ ವ್ಯಕ್ತಿಯಾಗಿದ್ದಾರೆ. ಮುಖೇಶ್ ಅಂಬಾನಿ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಮುಕೇಶ್‌ ಅಂಬಾನಿ ಇತ್ತೀಚೆಗಷ್ಟೇ 100 ಶತಕೋಟಿ ಡಾಲರ್‌ ಕ್ಲಬ್‌ ಸೇರಿದ್ದರು. ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿ ಕೊಂಡಿದ್ದ ಗೌತಮ್‌ ಅದಾನಿ ಅವರನ್ನು ಹಿಂದಿಕ್ಕಿ ಮುಕೇಶ್‌ ಅಂಬಾನಿ ಈ ಸ್ಥಾನ ಪಡೆದಿದ್ದರು.  ಮುಕೇಶ್‌ ಅಂಬಾನಿ ಅವರು 2021ರಲ್ಲಿಯೇ 100 ಶತಕೋಟಿ ಡಾಲರ್‌ ಆಸ್ತಿ ಹೊಂದಿದ ಉದ್ಯಮಿ ಎನಿಸಿದ್ದರು. ಆದರೆ, ನಂತರದಲ್ಲಿ ಅವರ ಆಸ್ತಿಯ ಮೌಲ್ಯ ಕುಸಿದಿತ್ತು.

ಗೌತಮ್ ಅದಾನಿ ಭಾರತದ ಪೈಕಿ ಎರಡನೇ ಸ್ಥಾನದಲ್ಲಿದ್ದು, ಅವರ ಸಂಪತ್ತಿನ ಮೌಲ್ಯ 36.8 ಶತಕೋಟಿ ಡಾಲರ್. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅವರು 17 ಸ್ಥಾನದಲ್ಲಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಸಾವಿತ್ರಿ ಜಿಂದಾಲ್ ಆಗಿದ್ದು, ಇವರು ಈಗ ಭಾರತದ ನಾಲ್ಕನೇ ಶ್ರೀಮಂತರಾಗಿದ್ದಾರೆ. ಕಳೆದ ವರ್ಷ ಇವರು ಆರನೇ ಸ್ಥಾನದಲ್ಲಿದ್ದರು.

ಈ ಬಾರಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 25 ಹೊಸ ಭಾರತೀಯ ಬಿಲಿಯನೇರ್‌ಗಳು ಸೇರ್ಪಡೆಯಾಗಿದ್ದಾರೆ. ಇವರಲ್ಲಿ ನರೇಶ್ ಟ್ರೆಹಾನ್, ರಮೇಶ್ ಕುಂಞಿಕಣ್ಣನ್ ಮತ್ತು ರೇಣುಕಾ ಜಗ್ತಿಯಾನಿ ಸೇರಿದ್ದಾರೆ. ದಿವಾಳಿಯಾಗಿರುವ ಬೈಜು ರವೀಂದ್ರನ್ ಮತ್ತು ರೋಹಿಕಾ ಮಿಸ್ತ್ರಿ ಅವರನ್ನು ಈ ಬಾರಿ ಕೈಬಿಡಲಾಗಿದೆ.

ಭಾರತದ ಅಗ್ರ ಐದು ಶ್ರೀಮಂತ ವ್ಯಕ್ತಿಗಳು ಮತ್ತು ಅವರ ಸಂಪತ್ತು  
ಮುಕೇಶ್ ಅಂಬಾನಿ- 116 ಬಿಲಿಯನ್
ಗೌತಮ್ ಅದಾನಿ- 84 ಬಿಲಿಯನ್
ಶಿವ ನಾಡಾರ್- 36.9 ಬಿಲಿಯನ್
ಸಾವಿತ್ರಿ ಜಿಂದಾಲ್- 33.5 ಬಿಲಿಯನ್
ದಿಲೀಪ್ ಶಾಂಘ್ವಿ- 26.7 ಬಿಲಿಯನ್

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ