ಸ್ವಾದಿಷ್ಠವಾದ ಹುರಿಗಾಳು

ಶುಕ್ರವಾರ, 15 ಮಾರ್ಚ್ 2019 (15:48 IST)
ಬೇಕಾಗುವ ಪದಾರ್ಥಗಳು : 
¼ ಕಪ್ ಶೇಂಗಾ ಅಥವಾ ಕಡಲೇಕಾಯಿ
¼ ಕಪ್ ಹುರಿಗಡಲೆ ಅಥವಾ ಕಡಲೆಪಪ್ಪು
ಅರ್ಧ ಕಪ್ ಸಣ್ಣದಾಗಿ ಹಚ್ಚಿದ ಒಣಕೊಬ್ಬರಿ
¼ ಕಪ್  ಹೆಸರುಕಾಳು
¼ ಕಪ್  ಕಡಲೆಕಾಳು
¼ ಕಪ್  ಅಲಸಂದೆ ಕಾಳು
¼ ಕಪ್  ಹುರುಳಿ ಕಾಳು
2 ಟೀಸ್ಪೂನ್ ಅಚ್ಚಕಾರದಪುಡಿ
2 ಟೀಸ್ಪೂನ್ ನಿಂಬೆ ರಸ
ಚಿಟಿಕೆ ಅರಿಶಿನ ಪುಡಿ
ಅರ್ಧ ಟೀಸ್ಪೂನ್ ಇಂಗು
ರುಚಿಗೆ ತಕ್ಕಷ್ಟು ಉಪ್ಪು
 
ಹುರಿಗಾಳು ಮಾಡುವ ವಿಧಾನ:
 
ಹೆಸರುಕಾಳು, ಕಡಲೆಕಾಳು, ಅಲಸಂದೆ ಕಾಳು ಮತ್ತು ಹುರುಳಿ ಕಾಳನ್ನು ತೊಳೆದು -7-8 ಗಂಟೆಗಳ ಕಾಲ ನೆನಸಿಡಿ. ನಂತರ ನೀರನ್ನು ಸಂಪೂರ್ಣವಾಗಿ ಬಗ್ಗಿಸಿ, ಬಟ್ಟೆಯ ಮೇಲೆ ಹರಡಿ, 2 ಗಂಟೆಗಳ ಕಾಲ ಆರಲು ಬಿಡಿ. ಈ ಸಮಯದಲ್ಲಿ ಒಂದು ದಪ್ಪ ತಳದ ಬಾಣಲೆಯಲ್ಲಿ ಹೆಚ್ಚಿನ ಕೊಬ್ಬರಿಯನ್ನು ಗರಿ ಗರಿಯಾಗಿ ಹುರಿದುಕೊಳ್ಳಿ. ನಂತರ ಅದೇ ಬಾಣಲಿಯಲ್ಲಿ ಹುರಿಗಡಲೆಯನ್ನು ಬಿಸಿಯಾಗುವವರೆಗೆ ಹುರಿದು ಪಕ್ಕಕ್ಕಿಡಿ. 
 
ಕಡ್ಲೆಕಾಯಿಯನ್ನು ಕಂದು ಬಣ್ಣ ಬರುವವರಗೆ ಮಧ್ಯಮ ಉರಿಯಲ್ಲಿ ಹುರಿದು ಪಕ್ಕಕ್ಕಿಡಿ. ತಣ್ಣಗಾದ ನಂತರ ಕಡಲೆಕಾಯಿಯ ಸಿಪ್ಪೆಯನ್ನು ಬೇಕಾದರೆ ಬೇರ್ಪಡಿಸಿ ಇಲ್ಲವೆ ಹಾಗೆ ಇರಿಸಿ. ನಂತರ ನೆನೆಸಿದ ಕಾಳುಗಳನ್ನು ಒಂದೊಂದಾಗಿ ಮಧ್ಯಮ ಉರಿಯಲ್ಲಿ ಹುರಿಯಬೇಕು. ಕಾಳುಗಳು ಮೊದಲಿನ ಗಾತ್ರಕ್ಕೆ ಬರುವವರೆಗೆ ಮತ್ತು ಚಟಪಟ ಸದ್ದು ಮಾಡುತ್ತ ಒಡೆಯುವ ತನಕ ಹುರಿಯಿರಿ. ಬಿಸಿ ಆರಲು ಬಿಡಿ.
 
ಒಂದು ಸಣ್ಣ ಬಟ್ಟಲಿನಲ್ಲಿ ಅಚ್ಚಕಾರಪುಡಿ, ನಿಂಬೆ ರಸ, ಇಂಗು ಮತ್ತು ಉಪ್ಪಿ ಕಲಸಿ 1-2 ಟೇಬಲ್ ಸ್ಪೂನ್ ನೀರು ಸೇರಿಸಿ, ದಪ್ಪನಾದ ಮಸಾಲೆಯನ್ನು ಮಾಡಿಕೊಳ್ಳಿ. ಹುರಿದ ಕಾಳುಗಳು ಬಿಸಿ ಆರಿದ ಮೇಲೆ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ. ಪುನಃ ಸ್ಟವ್ ಮೇಲಿಟ್ಟು ಕಾಳುಗಳು ಒಣಗುವವರೆಗೆ ಹುರಿಯಿರಿ. ಸ್ಟವ್ ಆಫ್ ಮಾಡಿದ ನಂತರ ಹುರಿದ ಕಡ್ಲೆಕಾಯಿ, ಹುರಿಗಡಲೆ ಮತ್ತು ಕೊಬ್ಬರಿ ಹಾಕಿ ಮಗುಚಿ. ತಣ್ಣಗಾದ ಮೇಲೆ ಗಾಳಿಯಾಡುವ ಡಬ್ಬದಲ್ಲಿ ಹಾತಿ ಎತ್ತಿಡಿ. ಸಂಜೆ ಕಾಫಿ-ಟೀ ಸಮಯದಲ್ಲಿ ಸವಿಯಲು ಚೆನ್ನಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ