ಕೆಸುವಿನ ಸೊಪ್ಪಿನ ಪತ್ರೊಡೆ...!!

ನಾಗಶ್ರೀ ಭಟ್

ಮಂಗಳವಾರ, 26 ಡಿಸೆಂಬರ್ 2017 (16:20 IST)
ಪತ್ರೊಡೆ ಅಥವಾ ಪತ್ರವಡೆ ಕರ್ನಾಟಕದ ಕೆಲವು ಭಾಗಗಳಲ್ಲಿ ಅದರಲ್ಲೂ ಉಡುಪಿ, ಮಂಗಳೂರು ಮತ್ತು ಮಲೆನಾಡಿನ ಕಡೆ ಬಹಳ ಪ್ರಸಿದ್ಧವಾಗಿರುವ ತಿನಿಸು. ಇದನ್ನು ಮಾಡುವ ವಿಧಾನವು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ಬದಲಾವಣೆಯಿದೆ.

ಇದೊಂದು ಸಾಂಪ್ರದಾಯಿಕ ತಿನಿಸಾಗಿದ್ದು ಪತ್ರೊಡೆಯನ್ನು ಅಕ್ಕಿ ಮತ್ತು ಕೆಸುವಿನ ಎಲೆಯನ್ನು ಬಳಸಿ ಮಾಡುತ್ತಾರೆ ಮತ್ತು ಇದು ತುಂಬಾ ರುಚಿಯಾಗಿರುತ್ತದೆ. ಕೆಸುವಿನ ಎಲೆಯಲ್ಲಿ ತುಂಬಾ ತುರಿಕೆಯ ಅಂಶವಿರುವುದರಿಂದ ಎಲ್ಲಾ ರೀತಿಯ ಕೆಸುವಿನ ಎಲೆಗಳು ಸೂಕ್ತವಲ್ಲ. ಕಪ್ಪು ಕೆಸುವಿನ ಎಲೆ ಮತ್ತು ಮರ ಕೆಸುವಿನ ಎಲೆ ಇದಕ್ಕೆ ಬಹಳ ಸೂಕ್ತವಾದುದು. ನೀವೂ ಇದನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳಬೇಕೆಂದರೆ ಈ ಲೇಖನವನ್ನು ಓದಿ.
 
ಬೇಕಾಗುವ ಸಾಮಗ್ರಿಗಳು:
 
ಕೆಸುವಿನ ಎಲೆ - 15-20
ದೋಸೆ ಅಕ್ಕಿ - 2 ಕಪ್
ಕೆಂಪು ಮೆಣಸು - 8-10
ಕೊತ್ತಂಬರಿ - 4-5 ಚಮಚ
ಜೀರಿಗೆ - 1 ಚಮಚ
ಕಾಯಿತುರಿ - 1/2 ಕಪ್
ಇಂಗು - 1/4 ಚಮಚ
ಹುಣಿಸೆ ಹಣ್ಣು - 1 ನಿಂಬೆ ಗಾತ್ರ
ಬೆಲ್ಲ - 1 ನಿಂಬೆ ಗಾತ್ರ
ಉಪ್ಪು - ರುಚಿಗೆ
ಎಣ್ಣೆ ಅಥವಾ ತುಪ್ಪ - 1/2 ಕಪ್
 
ಮಾಡುವ ವಿಧಾನ:
 
* ಕಪ್ಪು ಕೆಸುವಿನ ಎಳೆಯದಾದ ಎಲೆಗಳು ಅಡುಗೆಗೆ ಸೂಕ್ತವಾಗಿರುತ್ತವೆ. 15-20 ಕೆಸುವಿನ ಎಲೆಗಳನ್ನು ತೆಗೆದುಕೊಂಡು ಅವುಗಳ ಹಿಂದಿನ ತೊಟ್ಟುಗಳನ್ನು ತೆಗೆದು ಚೆನ್ನಾಗಿ ತೊಳೆದಿಟ್ಟುಕೊಳ್ಳಿ.
 
* 4-5 ಗಂಟೆ ನೆನೆಸಿಟ್ಟ ಅಕ್ಕಿಯನ್ನು ತೊಳೆದು ಅದಕ್ಕೆ ಕೆಂಪು ಮೆಣಸು, ಕೊತ್ತಂಬರಿ, ಜೀರಿಗೆ, ಕಾಯಿತುರಿ, ಇಂಗು, ಹುಣಿಸೆ ಹಣ್ಣು, ಬೆಲ್ಲ, ಉಪ್ಪು ಮತ್ತು ಅಗತ್ಯವಿರುವಷ್ಟು ನೀರನ್ನು ಸೇರಿಸಿ ರುಬ್ಬಿಕೊಳ್ಳಿ.
 
* ಒಂದು ಕೆಸುವಿನ ಎಲೆಯನ್ನು ತೆಗೆದುಕೊಂಡು ಅದರ ಹಿಂಬದಿಗೆ ಹಿಟ್ಟನ್ನು ಹಚ್ಚಿ. ನಂತರ ಅದರ ಮೇಲೆ ಇನ್ನೊಂದು ಎಲೆಯನ್ನು ಇಟ್ಟು ಹಿಟ್ಟನ್ನು ಹಚ್ಚಿ. ಹೀಗೆ 3-4 ಎಲೆಗಳನ್ನು ಸೇರಿಸಿ. ಎಲೆಗಳ ಎರಡೂ ಬದಿಯನ್ನು ಸ್ವಲ್ಪ ಮಡಚಿಕೊಂಡು ಅದನ್ನು ಸುತ್ತಿ ರೋಲ್ ಮಾಡಿ. ಹೀಗೆ ಉಳಿದ ಎಲೆಗಳಿಂದ 5-6 ರೋಲ್‌ಗಳನ್ನು ಮಾಡಬಹುದು.
 
* ನಂತರ ಈ ರೋಲ್‌ಗಳನ್ನು ಇಡ್ಲಿ ಕುಕ್ಕರ್‌ನಲ್ಲಿ 1 ಗಂಟೆ ಬೇಯಿಸಿ.
 
* ಬೆಂದಿರುವ ರೋಲ್‌ಗಳು ಸ್ಪಲ್ಪ ತಣ್ಣಗಾದ ಮೇಲೆ ಅದನ್ನು ವೃತ್ತಾಕಾರದ ಸ್ಲೈಸ್‌ಗಳನ್ನಾಗಿ ಕತ್ತರಿಸಿ. ಈ ಸ್ಲೈಸ್‌ಗಳನ್ನು ದೋಸೆಯ ಹೆಂಚಿನ ಮೇಲೆ ತುಪ್ಪ ಅಥವಾ ಎಣ್ಣೆ ಹಾಕಿ ಫ್ರೈ ಮಾಡಿದರೆ ಪತ್ರೊಡೆ ರೆಡಿ.
 
* ಬಾಣಲೆಗೆ 1/4 ಕಪ್ ಎಣ್ಣೆ ಹಾಕಿ ಬಿಸಿಯಾದ ನಂತರ 2 ಚಮಚ ಉದ್ದಿನ ಬೇಳೆ, 1 ಚಮಚ ಸಾಸಿವೆ, ಕರಿಬೇವು ಸ್ವಲ್ಪ ಹಾಕಿ ನಂತರ ಹೆಚ್ಚಿರುವ ಕೆಸುವಿನ ರೋಲ್‌ಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಲೂಬಹುದು.
 
ಇದು ಮಳೆಗಾಲ ಅಥವಾ ಚಳಿಗಾಲದಲ್ಲಿ ತುಂಬಾ ಚೆನ್ನಾಗಿರುತ್ತದೆ. ನೀವೂ ಒಮ್ಮೆ ಪ್ರಯತ್ನಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ