ಒಲಿಂಪಿಕ್ಸ್‌ನಲ್ಲಿ ಸೆಮಿ ಪ್ರವೇಶಿಸಿದ ಭಾರತ ಹಾಕಿ ತಂಡಕ್ಕೆ ಆಘಾತ: ಮುಂದಿನ ಪಂದ್ಯಕ್ಕೆ ರೋಹಿದಾಸ್‌ ನಿಷೇಧ

Sampriya

ಸೋಮವಾರ, 5 ಆಗಸ್ಟ್ 2024 (14:17 IST)
Photo Courtesy X
ಪ್ಯಾರಿಸ್: ಹರ್ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ಭಾರತ ಪುರುಷರ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಕೆಚ್ಚೆದೆಯ ಹೋರಾಟ ನಡೆಸಿ ಸೆಮಿಫೈನಲ್ ತಲುಪಿದೆ. ಅದರಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಬ್ರಿಟನ್ ವಿರುದ್ಧದ ಗೆಲುವಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಅದರ ಬೆನ್ನಲ್ಲೇ ಭಾರತ ತಂಡಕ್ಕೆ ಆಘಾತಕಾರಿ ಸುದ್ದಿ ಎದುರಾಗಿದೆ.

ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಅನುಭವಿ ಡಿಫೆಂಡರ್‌ ಅಮಿತ್‌ ರೋಹಿದಾಸ್‌ ಎರಡನೇ ಕ್ವಾರ್ಟರ್‌ ಮಧ್ಯದಲ್ಲಿ ವಿಲಿಯಂ ಕಲ್ನಾನ್ ಅವರತ್ತ ಅಜಾಗೂಕತೆಯಿಂದ ಸ್ಟಿಕ್ ಎತ್ತಿದ್ದಕ್ಕೆ ಕೆಂಪುಕಾರ್ಡ್‌ ಪಡೆದು ಹೊರ ನಡೆಯಬೇಕಾಯಿತು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಹಾಕಿ ಒಕ್ಕೂಟವು ಆಟದ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಅಮಿತ್‌ ರೋಹಿದಾಸ್‌ ಅವರನ್ನು ಒಂದು ಪಂದ್ಯವಾಡದಂತೆ ನಿಷೇಧ ಹೇರಿದೆ. ಇದರಿಂದ ಜರ್ಮನಿ ವಿರುದ್ಧದ ಸೆಮಿಫೈನಲ್‌ನಲ್ಲಿ ಅಮಿತ್‌ ರೋಹಿದಾಸ್‌ ಹೊರಗೆ ಉಳಿಯಬೇಕಿದೆ.

ಇನ್ನೊಂದೆಡೆ ಅಮಿತ್‌ ರೋಹಿದಾಸ್‌ ನಿಷೇಧದ ವಿರುದ್ಧ ಎಫ್‌ಐಎಚ್‌ಗೆ ಹಾಕಿ ಇಂಡಿಯಾ ಮೇಲ್ಮನವಿ ಸಲ್ಲಿಸಿದೆ. ಈ ಬಗ್ಗೆ ಅಂತರರಾಷ್ಟ್ರೀಯ ಹಾಕಿ ಒಕ್ಕೂಟದ ತೀರ್ಮಾನ ಕುತೂಹಲ ಕೆರಳಿಸಿದೆ.

ಬ್ರಿಟನ್ ವಿರುದ್ಧ ಇವ್ಸ್‌ ಡಿ ಮ್ಯಾನುವಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಸಿಂಗ್ ಪಡೆ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೆಲುವು ಸಾಧಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ