ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್‌- ವಿಕ್ಟರ್‌ ಹಣಾಹಣಿಗೆ ವೇದಿಕೆ ಸಜ್ಜು: ಗೆದ್ದರೆ ಚಾರಿತ್ರಿಕ ದಾಖಲೆ

Sampriya

ಭಾನುವಾರ, 4 ಆಗಸ್ಟ್ 2024 (10:05 IST)
Photo Courtesy X
ಪ್ಯಾರಿಸ್:  ಭಾರತದ ಲಕ್ಷ್ಯ ಸೇನ್ ಅವರು ಒಲಿಂಪಿಕ್ ಕೂಟದ ಬ್ಯಾಡ್ಮಿಂಟನ್‌ನ ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ಇಂದು ಮಧ್ಯಾಹ್ನ 3.30ಕ್ಕೆ ಹಾಲಿ ಚಾಂಪಿಯನ್ ವಿಕ್ಟರ್‌ ಆಕ್ಸೆಲಸೆನ್ ಅವರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಆಟಗಾರ ಎಂಬ ದಾಖಲೆಗೆ ಲಕ್ಷ್ಯ ಸೇನ್‌ ಪಾತ್ರವಾಗಿದ್ದಾರೆ. ಶುಕ್ರವಾರ ನಡೆದಿದ್ದ ರೋಚಕ ಕ್ವಾರ್ಟರ್‌ಫೈನಲ್‌ನಲ್ಲಿ ಲಕ್ಷ್ಯ ಅವರು ಚೈನೀಸ್ ತೈಪೆಯ ಚೌ ಟೀನ್ ಚೆನ್ ವಿರುದ್ಧ ಜಯಿಸಿದ್ದರು.

ಉತ್ತರಾಖಂಡದ ಅಲ್ಮೋರಾದ 22 ವರ್ಷದ ಲಕ್ಷ್ಯ ಅವರಿಗೆ ಇದು ಚೊಚ್ಚಲ ಒಲಿಂಪಿಕ್ಸ್‌.  ಆದರೆ ವಿಕ್ಟರ್‌ ಅನುಭವಿಯಾಗಿದ್ದಾರೆ. ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು ಟೋಕಿಯೊದಲ್ಲಿ ಚಿನ್ನ ಜಯಿಸಿದ್ದರು.  ಎರಡು ಸಲ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ.

ಲಕ್ಷ್ಯ ಅವರು ಬೆಂಗಳೂರಿನ ಪ್ರಕಾಶ ಪಡುಕೋಣೆ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ ಪಡುಕೋಣೆ ಮತ್ತು ವಿಮಲ್‌ಕುಮಾರ್ ಅವರು ಲಕ್ಷ್ಯಗೆ ಕೋಚ್ ಆಗಿದ್ದಾರೆ.

 ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಪದಕ ಜಯಿಸುವ ಏಕೈಕ ಭರವಸೆಯಾಗಿ ಲಕ್ಷ್ಯ ಸೇನ್ ಹೊರಹೊಮ್ಮಿದ್ದಾರೆ.  ಇಂದಿನ ಪಂದ್ಯದಲ್ಲಿ ಗೆದ್ದರೆ ಚಾರಿತ್ರಿಕ ದಾಖಲೆಯಾಗಲಿದೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಜಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಅವರು ಈಗಾಗಲೇ ನಿರ್ಗಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ