ಏಷ್ಯಾ ಕಪ್ ಕ್ರಿಕೆಟ್: ರೋಹಿತ್ ಶೂನ್ಯಕ್ಕೆ ಔಟ್, ಕರ್ಮ ರಿಟರ್ನ್ಸ್ ಎಂದ ಕೊಹ್ಲಿ ಫ್ಯಾನ್ಸ್

ಶುಕ್ರವಾರ, 15 ಸೆಪ್ಟಂಬರ್ 2023 (20:09 IST)
ಕೊಲೊಂಬೊ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಬಾಂಗ್ಲಾ ಪರ ನಾಯಕ ಶಕೀಬ್ ಅಲ್ ಹಸನ್ 80 ರನ್ ಗಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ತೌಹಿದ್ ಹೃದೊಯ್ 54, ನೌಸುಂ ಅಹಮ್ಮದ್ 44 ರನ್ ಗಳಿಸಿದರು. ಭಾರತದ ಪರ ಶಾರ್ದೂಲ್ ಠಾಕೂರ್ 3, ಮೊಹಮ್ಮದ್ ಶಮಿ 2,ಪ್ರಸಿದ್ಧ ಕೃಷ್ಣ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ ತಲಾ 1 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ, ತಿಲಕ್ ವರ್ಮ ರೂಪದಲ್ಲಿ ಆಘಾತ ಸಿಕ್ಕಿದೆ. ರೋಹಿತ್ ಶೂನ್ಯಕ್ಕೆ ನಿರ್ಗಮಿಸಿದರೆ ಇಂದು ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ತಿಲಕ್ ವರ್ಮ 5 ರನ್ ಗೆ ವಿಕೆಟ್ ಒಪ್ಪಿಸಿದರು. ಈ ಪಂದ್ಯದಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವುದು ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿಟ್ಟನ್ನು ರೋಹಿತ್ ಮೇಲೆ ಕೊಹ್ಲಿ ಫ್ಯಾನ್ಸ್ ತೀರಿಸಿಕೊಂಡಿದ್ದಾರೆ. ಕೊಹ್ಲಿಗೆ ಸ್ಥಾನ ನೀಡದ ರೋಹಿತ್ ಶೂನ್ಯಕ್ಕೆ ಔಟಾದರೆ, ಅವರ ಸ್ಥಾನಕ್ಕೆ ಆಯ್ಕೆಯಾದ ತಿಲಕ್ 5 ರನ್ ಗೆ ಔಟಾದರು. ಕರ್ಮ ತಿರುಗಿ ಬಂದೇ ಬರುತ್ತದೆ ಎಂದು ಕೊಹ್ಲಿ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಕ್ರೀಸ್ ನಲ್ಲಿ 28 ರನ್ ಗಳಿಸಿರುವ ಶುಬ್ಮನ್ ಗಿಲ್ ಮತ್ತು 14 ರನ್ ಗಳಿಸಿರುವ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ