ಬಾರ್ಡರ್,ಗವಾಸ್ಕರ್ ಟೆಸ್ಟ್: ಆಸೀಸ್ 263 ಕ್ಕೆ ಆಲೌಟ್, ಜಡೇಜಾ, ಅಶ್ವಿನ್ ದಾಖಲೆ

ಶುಕ್ರವಾರ, 17 ಫೆಬ್ರವರಿ 2023 (16:20 IST)
Photo Courtesy: Twitter
ನವದೆಹಲಿ: ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದ ಮೊದಲ ದಿನ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 263 ರನ್ ಗಳಿಗೆ ಆಲೌಟ್ ಆಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಗೆ ಡೇವಿಡ್ ವಾರ್ನರ್, ಉಸ್ಮಾನ್ ಖವಾಜ ಉತ್ತಮ ಆರಂಭ ಒದಗಿಸಿದರು. ಆದರೆ ವಾರ್ನರ್ 15 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ಖವಾಜ 81 ರನ್ ಗಳ ಉತ್ತಮ ಇನಿಂಗ್ಸ್ ಆಡಿದರು. ವಾರ್ನರ್ ವಿಕೆಟ್ ನ್ನು ಮೊಹಮ್ಮದ್ ಶಮಿ ಕಿತ್ತರೆ, ಅದರ ಹಿಂದೆಯೇ ಅಶ್ವಿನ್ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಿತ್ತು ಮತ್ತಷ್ಟು ಆಘಾತ ನೀಡಿದರು.

ಬಳಿಕ  ಆಸೀಸ್ ಇನಿಂಗ್ಸ್ ಮುನ್ನಡೆಸುವ ಹೊಣೆ ಪೀಟರ್ ಹ್ಯಾಂಡ್ಸ್ ಕೋಂಬ್ ಅವರದ್ದಾಯಿತು. ಕೊನೆಯವರೆಗೂ ಅಜೇಯರಾಗುಳಿದ ಅವರು 72 ರನ್ ಗಳಿಸಿದರು. ನಾಯಕ ಪ್ಯಾಟ್ ಕ್ಯುಮಿನ್ಸ್ 33 ರನ್ ಗಳ ಕೊಡುಗೆ ನೀಡಿದರು.

ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ಮೊಹಮ್ಮದ್ ಶಮಿ 2 ವಿಕೆಟ್ ಕಿತ್ತರೆ, ಸ್ಪಿನ್ ದ್ವಯರಾದ ರವೀಂದ್ರ ಜಡೇಜಾ 4, ರವಿಚಂದ್ರನ್ ಅಶ್ವಿನ್ 3 ವಿಕೆಟ್ ಕಬಳಿಸಿದರು. ಅಕ್ಸರ್ ಪಟೇಲ್ ಮತ್ತೆ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಮೊಹಮ್ಮದ್ ಸಿರಾಜ್ ಕೂಡಾ ಇಂದು ಕಮಾಲ್ ಮಾಡಲಿಲ್ಲ.

ಅಶ್ವಿನ್, ಜಡೇಜಾ ದಾಖಲೆ: ಇನ್ನು ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 250 ವಿಕೆಟ್ ಪಡೆದ ವಿಶ್ವದಾಖಲೆ ಮಾಡಿದರು. ಅತ್ತ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ನಲ್ಲಿ 100 ಪ್ಲಸ್ ವಿಕೆಟ್ ಸಂಪಾದಿಸಿದ ಎರಡನೇ ಭಾರತದ ಬೌಲರ್ ಎನಿಸಿಕೊಂಡರು. ಅನಿಲ್ ಕುಂಬ್ಳೆ ಈ ಮೊದಲು ಈ ಸಾಧನೆ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ