ಮಹಿಳಾ ಟಿ20 ವಿಶ್ವಕಪ್: ‘ಹಿಟ್ ವುಮನ್’ ರಿಚಾ ಘೋಷ್ ಮತ್ತೊಮ್ಮೆ ಜಬರ್ದಸ್ತ್ ಆಟ

ಗುರುವಾರ, 16 ಫೆಬ್ರವರಿ 2023 (08:40 IST)
Photo Courtesy: Twitter
ಕೇಪ್ ಟೌನ್: ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತು. ಆರಂಭದ ವಿಕೆಟ್ ನ್ನು ವಿಂಡೀಸ್ ಬೇಗನೇ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್ ಗೆ ಟೇಲರ್ (42), ಕ್ಯಾಂಪ್ ಬೆಲ್ಲೆ (30) ಉತ್ತಮ ಜೊತೆಯಾಟವಾಡಿದರು. ಬಳಿಕ ವಿಂಡೀಸ್ ಕುಸಿಯುತ್ತಾ ಸಾಗಿತು. ಇದರಿಂದಾಗಿ ನಿರೀಕ್ಷಿಸಿದಷ್ಟು ರನ್ ಆಗಲಿಲ್ಲ. ಬೌಲಿಂಗ್ ನಲ್ಲಿ ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಮಿಂಚಿದರು.

ಈ ಮೊತ್ತ ಬೆನ್ನತ್ತಿದ ಭಾರತಕ್ಕೆ ಸ್ಮೃತಿ ಮಂಧನಾ, ಶಫಾಲಿ ವರ್ಮ ಉತ್ತಮ ಆರಂಭ ನೀಡಿದರು. ಆದರೆ ಮುನ್ನುಗ್ಗಿ ಬಾರಿಸಲು ಹೋದ ಸ್ಮೃತಿ 10 ರನ್ ಗೆ ಸ್ಟಂಪ್ ಔಟ್ ಆದರು. ಶಫಾಲಿ ವರ್ಮ ಎಂದಿನಂತೆ ಬಿರುಸಿನ 28 ರನ್ ಗಳಿಸಿದರಾದರೂ ಇಲ್ಲದ ಸಿಕ್ಸರ್ ಬಾರಿಸಲು ಹೋಗಿ ವಿಕೆಟ್ ಕೈ ಚೆಲ್ಲಿದರು. ಕಳೆದ ಪಂದ್ಯದ ಹೀರೋಯಿನ್ ಜೆಮಿಮಾ ರೊಡ್ರಿಗಸ್ ಕೇವಲ 1 ರನ್ ಗೆ ಇನಿಂಗ್ಸ್ ಮುಗಿಸಿದರು. ಈ ವೇಳೆ ತಂಡ ಸಂಕಷ್ಟಕ್ಕೆ ಸಿಲುಕಿತು.

ಆಗ ಜೊತೆಯಾಗಿದ್ದು ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ರಿಚಾ ಘೋಷ್. ಹರ್ಮನ್ ತಾಳ್ಮೆಯ ಆಟವಾಡಿ 33 ರನ್ ಗಳಿಸಿದ್ದಾಗ ಗೆಲುವಿನ ಬೌಂಡರಿ ಗಳಿಸುವ ಯತ್ನದಲ್ಲಿ ಔಟಾದರು. ಇನ್ನೊಂದೆಡೆ ರಿಚಾ ಘೋಷ್ ಮತ್ತೆ ತಾವು ಹಿಟ್ ವುಮನ್ ಎಂಬುದನ್ನು ಸಾಬೀತುಪಡಿಸಿದರು. ಕೇವಲ 32 ಎಸೆತಗಳಲ್ಲಿ ಅಜೇಯ 44 ರನ್ ಗಳಿಸಿದ ಅವರು ತಂಡಕ್ಕೆ ಗೆಲುವು ಕೊಡಿಸಿದರು. ಅಂತಿಮವಾಗಿ ಭಾರತ 18.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ