ಅಹಮ್ಮದಾಬಾದ್: ಐಪಿಎಲ್ ನಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಆಧಿಪತ್ಯ ಸಾಧಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದ ಚೆನ್ನೈ ಐದನೇ ಬಾರಿಗೆ ಚಾಂಪಿಯನ್ ಆಯಿತು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಸಾಯಿ ಸುದರ್ಶನ್ 96 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ ಬ್ಯಾಟಿಂಗ್ ಆರಂಭಿಸುತ್ತಿದ್ದಂತೇ ಮಳೆ ಸುರಿಯಿತು. ಹೀಗಾಗಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 15 ಓವರ್ ಗಳಲ್ಲಿ 171 ರನ್ ಗಳಿಸುವ ಗುರಿ ನೀಡಲಾಯಿತು.
ಚೆನ್ನೈ ಪರ ಪ್ರತಿಯೊಬ್ಬರೂ ಉಪಯುಕ್ತ ಕಾಣಿಕೆ ನೀಡಿದರು. ಋತುರಾಜ್ ಗಾಯಕ್ ವಾಡ್ 26, ಡ್ವಾನ್ ಕಾನ್ವೇ 47, ಶಿವಂ ದುಬೆ ಅಜೇಯ 32, ಅಜಿಂಕ್ಯಾ ರೆಹಾನ್ 27, ಅಂಬಟಿ ರಾಯುಡು 19 ರನ್ ಗಳಿಸಿದರು. ಆದರೆ ನಾಯಕ ಧೋನಿ ಮಾತ್ರ ಬಂದ ಬಾಲ್ ಗೇ ಔಟಾಗಿ ನಿರಾಸೆ ಅನುಭವಿಸಿದರು. ಆದರೆ ಒತ್ತಡದಲ್ಲಿದ್ದ ಚೆನ್ನೈಗೆ ಗೆಲುವು ಕೊಡಿಸಿದ್ದು ರವೀಂದ್ರ ಜಡೇಜಾ. ಕೊನೆಯ ಎರಡು ಎಸೆತದಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ಗಳೊಂದಿಗೆ ಚೆನ್ನೈ ಗೆಲುವು ಸಾಧ್ಯವಾಗಿಸಿದರು. ಅಂತಿಮವಾಗಿ ಸಿಎಸ್ ಕೆ 15 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇದರೊಂದಿಗೆ ಧೋನಿ ಪಡೆ ಸಂಭ್ರಮ ಮುಗಿಲುಮುಟ್ಟಿತ್ತು.