ಮುಂಬೈ: ಟೀಂ ಇಂಡಿಯಾದ ಮುಂಚೂಣಿ ವೇಗಿ ಜಸ್ಪ್ರೀತ್ ಬುಮ್ರಾ ಹಿಂದೊಮ್ಮೆ ಕೆನಡಾ ದೇಶಕ್ಕೆ ವಲಸೆ ಹೋಗಲು ಯೋಜನೆ ರೂಪಿಸಿದ್ದರಂತೆ. ಈ ವಿಚಾರವನ್ನು ಅವರು ತಮ್ಮ ಪತ್ನಿ, ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಜೊತೆಗಿನ ಮಾತುಕತೆಯಲ್ಲಿ ಬಹಿರಂಗಪಡಿಸಿದ್ದಾರೆ.
ಕೆನಡಾದಲ್ಲಿ ನನ್ನ ಮಾವ ಮತ್ತು ಬಂಧುಗಳಿದ್ದಾರೆ. ಹೀಗಾಗಿ ಅಲ್ಲಿಗೆ ಹೋಗಿ ವಿದ್ಯಾಭ್ಯಾಸ ಪೂರ್ತಿ ಮಾಡಿ ಆ ದೇಶದ ಪರವಾಗಿಯೇ ಕ್ರಿಕೆಟ್ ಆಡೋಣವೆಂದುಕೊಂಡಿದ್ದೆ. ಯಾಕೆಂದರೆ ಭಾರತದಲ್ಲಿ ಅವಕಾಶ ಸಿಗಲ್ಲ ಎಂದುಕೊಂಡಿದ್ದೆ. ನನ್ನ ತಾಯಿ ತಡೆಯದೇ ಹೋಗಿದ್ದರೆ ಬಹುಶಃ ನಾನು ಈಗ ಕೆನಡಾದ ಕ್ರಿಕೆಟಿಗನಾಗಿರುತ್ತಿದ್ದೆ ಎಂದಿದ್ದಾರೆ.
ನಾನು ಮಾತ್ರವಲ್ಲದೆ, ನನ್ನ ಇಡೀ ಕುಟುಂಬ ಕೆನಡಾಗೆ ವಲಸೆ ಹೋಗೋಣವೆಂದುಕೊಂಡಿದ್ದೆವು. ಆದರೆ ನನ್ನ ತಾಯಿಗೆ ಇಷ್ಟವಿರಲಿಲ್ಲ. ಅಲ್ಲಿನ ಸಂಸ್ಕೃತಿ ನಮಗೆ ಸರಿಬರಲ್ಲ ಎಂದು ತಾಯಿ ತಡೆದರು. ಹೀಗಾಗಿ ಕೆನಡಾಗೆ ಹೋಗುವ ಪ್ಲ್ಯಾನ್ ರದ್ದಾಯಿತು ಎಂದು ಬುಮ್ರಾ ಬಹಿರಂಗಪಡಿಸಿದ್ದಾರೆ.
ಅದೃಷ್ಟವಶಾತ್ ಜಾನ್ ರೈಟ್ ನನ್ನನ್ನು ಗಮನಿಸಿ 19 ವರ್ಷದವನಾಗಿದ್ದಾಗಲೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಖರೀದಿ ಮಾಡಿದರು. ಆಗ ನಾನಿನ್ನೂ ರಣಜಿಯನ್ನೂ ಆಡಿರಲಿಲ್ಲ. ಆವತ್ತು ಬಹುಶಃ ನಾನು ಕೆನಡಾಗೆ ಹೋಗುವ ನಿರ್ಧಾರದಂತೆ ನಡೆದುಕೊಂಡಿದ್ದರೆ ಇಂದು ನನಗೆ ಭಾರತ ಮತ್ತು ಮುಂಬೈ ಇಂಡಿಯನ್ಸ್ ಪರ ಆಡುವ ಅವಕಾಶವೇ ಇರುತ್ತಿರಲಿಲ್ಲ ಎಂದು ಬುಮ್ರಾ ಹೇಳಿಕೊಂಡಿದ್ದಾರೆ.