ಕೋಲ್ಕೊತ್ತಾ: ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದ ಮೇಲೆ ಯಾವುದೂ ಸರಿ ಹೋಗುತ್ತಿಲ್ಲ ಎಂಬ ಸುದ್ದಿಯಿತ್ತು. ರೋಹಿತ್ ಶರ್ಮಾರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತಹ ವಿಡಿಯೋವೊಂದು ವೈರಲ್ ಆಗಿತ್ತು.
ರೋಹಿತ್ ಶರ್ಮಾ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ಕೋಚ್ ಅಭಿಷೇಕ್ ನಾಯರ್ ನಡುವೆ ನಡೆದ ಸಂಭಾಷಣೆಯ ತುಣುಕನ್ನು ಕೆಕೆಆರ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿತ್ತು. ಆದರೆ ಈ ವಿಡಿಯೋದಲ್ಲಿ ರೋಹಿತ್ ಮುಂಬೈ ತಂಡದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುತ್ತಾರೆ.
ವಿಡಿಯೋದಲ್ಲಿ ರೋಹಿತ್ ಒಂದೊಂದಾಗಿ ಎಲ್ಲವೂ ಬದಲಾಗುತ್ತಿದೆ. ಇದೆಲ್ಲಾ ಅವರಿಗೆ ಬಿಟ್ಟಿದ್ದು, ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಏನೇ ಆದರೂ ಇದು ನನ್ನ ಮನೆ. ನಾನು ಕಟ್ಟಿದ ದೇವಸ್ಥಾನವಿದು ಎನ್ನುತ್ತಾರೆ. ರೋಹಿತ್ ಮುಂಬೈ ತಂಡದ ಹೆಸರನ್ನು ನೇರವಾಗಿ ಹೇಳದೇ ಇದ್ದರೂ ಅವರು ತಮ್ಮದೇ ಫ್ರಾಂಚೈಸಿಯ ಬಗ್ಗೆಯೇ ಹೇಳಿರುವುದೆಂದು ಊಹಿಸಲಾಗಿದೆ. ಕೊನೆಯಲ್ಲಿ ಏನು ಮಾಡಿದರೂ ನಂಗೇನಾಗಬೇಕಿದೆ? ನನ್ನದು ಇದೇ ಕೊನೆಯದ್ದು ಎನ್ನುತ್ತಾರೆ.
ರೋಹಿತ್ ರ ಈ ಸಂಭಾಷಣೆ ವೈರಲ್ ಆಗುತ್ತಿದ್ದಂತೇ ಕೋಲ್ಕೊತ್ತಾ ಫ್ರಾಂಚೈಸಿ ವಿಡಿಯೋವನ್ನೇ ಸೋಷಿಯಲ್ ಮೀಡಿಯಾದಿಂದ ಕಿತ್ತು ಹಾಕಿದೆ. ಮೊನ್ನೆಯಷ್ಟೇ ನಡೆದ ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ಈ ಸಂಭಾಷಣೆ ನಡೆದಿದೆ.