T20 World Cup 2024: ಜಸ್ಪ್ರೀತ್ ಬುಮ್ರಾ ಮೇಡನ್ ಓವರ್ ದಾಖಲೆ, ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಶುಭಾರಂಭ

Krishnaveni K

ಗುರುವಾರ, 6 ಜೂನ್ 2024 (08:41 IST)
ನ್ಯೂಯಾರ್ಕ್: ಟಿ20  ವಿಶ್ವಕಪ್ 2024 ರಲ್ಲಿ ಟೀಂ ಇಂಡಿಯಾ 8 ವಿಕೆಟ್ ಗಳಿಂದ ಐರ್ಲೆಂಡ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ. ಜಸ್ಪ್ರೀತ್ ಬುಮ್ರಾ ಅತೀ ಹೆಚ್ಚು ಮೇಡನ್ ಓವರ್ ಎಸೆದು ದಾಖಲೆ ಮಾಡಿದರು.

ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಭಾರತದ ವೇಗದ ಬೌಲಿಂಗ್ ದಾಳಿಗೆ ನಲುಗಿದ ಐರ್ಲೆಂಡ್ 16 ಓವರ್ ಗಳಲ್ಲಿ 96 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ದಾಖಲೆ ಬೌಲಿಂಗ್ ಮಾಡಿದ ಬುಮ್ರಾ 3 ಓವರ್ ಗಳಲ್ಲಿ 1 ಮೇಡನ್ ಮತ್ತು ಕೇವಲ 6 ರನ್ ನೀಡಿ 2 ವಿಕೆಟ್ ಕಬಳಿಸಿದರು.  ಮೊದಲ ಓವರ್ ನ್ನೇ ಮೇಡನ್ ಎಸೆದ ಬುಮ್ರಾ ಟಿ20 ಕ್ರಿಕೆಟ್ ನಲ್ಲಿ ಪವರ್ ಪ್ಲೇ ನಲ್ಲಿ ಅತೀ ಹೆಚ್ಚು ಮೇಡನ್ ಓವರ್ ಎಸೆದ ದಾಖಲೆ ಮಾಡಿದರು.

ಐರ್ಲೆಂಡ್ ಪರ 14 ಎಸೆತಗಳಲ್ಲಿ 26 ರನ್ ಗಳಿಸಿದ ಡೆಲನಿ 26 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಭಾರತದ ಪರ ಅರ್ಷ್ ದೀಪ್ ಸಿಂಗ್ 2, ಹಾರ್ದಿಕ್ ಪಾಂಡ್ಯ 3, ಮೊಹಮ್ಮದ್ ಸಿರಾಜ್, ಅಕ್ಸರ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಭಾರತ 12.2 ಓವರ್ ಗಳಲ್ಲೇ 2 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ ಗೆಲುವು ಕಂಡಿತು. ಈ ಪಂದ್ಯದಲ್ಲಿ ಕೊಹ್ಲಿ-ರೋಹಿತ್ ಶರ್ಮಾ ಜೋಡಿ ಭಾರತದ ಪರ ಆರಂಭ ಮಾಡಿತು. ಆದರೆ ಕೊಹ್ಲಿ ಕೇವಲ 1 ರನ್ ಗಳಿಸಿ ಔಟಾದರು. ನಾಯಕ ರೋಹಿತ್ ಶರ್ಮಾ 37 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿ ಸಹಿತ 52 ರನ್ ಗಳಿಸಿ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಇನ್ನೊಂದೆಡೆ ರಿಷಬ್ ಪಂತ್ ಅಜೇಯ 36 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ರೋಹಿತ್ ಪೆವಿಲಿಯನ್ ಸೇರಿಕೊಂಡ ಬಳಿಕ ಸೂರ್ಯಕುಮಾರ್ ಯಾದವ್ ಕೇವಲ 2 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ