‘ಲುಂಗಿ’ ಡ್ಯಾನ್ಸ್ ಗೆ ಟೀಂ ಇಂಡಿಯಾ ಕ್ರಿಕೆಟಿಗರು ಸುಸ್ತೋ ಸುಸ್ತು!
ಬುಧವಾರ, 17 ಜನವರಿ 2018 (16:32 IST)
ಸೆಂಚೂರಿಯನ್: ಇತ್ತೀಚೆಗಿನ ದಿನಗಳಲ್ಲಿ ಸೋಲಿನ ರುಚಿಯೇ ಕಾಣದೆ ಮದವೇರಿದ ಆನೆಯಂತೆ ಸಾಗುತ್ತಿದ್ದ ಟೀಂ ಇಂಡಿಯಾಗೆ ದ.ಆಫ್ರಿಕಾ ಸರಿಯಾಗಿಯೇ ಅಂಕುಶ ಹಾಕಿದೆ. ನಿಗಿಡಿ ‘ಲುಂಗಿ’ ಡ್ಯಾನ್ಸ್ ಮಾಡಿಸುತ್ತಿದ್ದರೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಬಾಲ ಮುದುರಿಕೊಂಡು ಎರಡು ವರ್ಷಗಳ ನಂತರ ಟೆಸ್ಟ್ ಸರಣಿ ಸೋಲಿನ ಅವಮಾನದಿಂದ ತಲೆತಗ್ಗಿಸುವಂತಾಗಿದೆ.
ದ.ಆಫ್ರಿಕಾದಲ್ಲಿ ಇದುವರೆಗೆ ಕಂಡರಿಯದ ಗೆಲುವು ಕಾಣಲು ಹೊರಟಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ 135 ರನ್ ಗಳ ಹೀನಾಯ ಸೋಲು ಸಿಕ್ಕಿದೆ. ಇದರೊಂದಿಗೆ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಹಿನ್ನಡೆ ಅನುಭವಿಸಿದ್ದಲ್ಲದೆ, ಸರಣಿ ಸೋಲು ಅನುಭವಿಸಿದೆ.
ಎರಡೂ ಟೆಸ್ಟ್ ಪಂದ್ಯಗಳಲ್ಲಿ ಸ್ವಲ್ಪವೂ ಹೋರಾಟದ ಕಿಚ್ಚು ಟೀಂ ಇಂಡಿಯಾ ಆಟಗಾರರಲ್ಲಿ ಕಾಣಲೇ ಇಲ್ಲ. ಇದುವರೆಗೆ ಅಬ್ಬರಿಸುತ್ತಿದ್ದ ನಂ.1 ಟೆಸ್ಟ್ ಟೀಂ ಇದುವೆಯಾ ಎನ್ನುವಷ್ಟರ ಮಟ್ಟಿಗೆ ಬ್ಯಾಟ್ಸ್ ಮನ್ ಗಳ ಪೆವಿಲಿಯನ್ ಪೆರೇಡ್ ಸಾಗಿತ್ತು.
ಈ ಪಂದ್ಯದ ಮೂಲಕ ಆಫ್ರಿಕಾ ತಂಡಕ್ಕೆ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಲುಂಗಿ ನಿಗಿಡಿ (6 ವಿಕೆಟ್) ಬೌಲ್ ಗೆ ತತ್ತರಿಸಿದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಕೇವಲ 50 ಓವರ್ ಗಳಲ್ಲಿ 151 ರನ್ ಗಳಿಗೆ ಆಲೌಟ್ ಆದರು.
ದ್ವಿತೀಯ ಇನಿಂಗ್ಸ್ ನಲ್ಲಿ ರೋಹಿತ್ ಶರ್ಮಾ 47 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟ್ಸ್ ಮನ್ ಗಳಿಂದಲೂ ನಿಂತು ಆಡುವ ಛಲ ಕಾಣಲೇ ಇಲ್ಲ. ಇದರೊಂದಿಗೆ ವಿಶ್ವದ ಯಾವ ಮೂಲೆಯಲ್ಲಾದರೂ ಈ ತಂಡ ಗೆಲ್ಲಲು ಸಮರ್ಥವಾಗಿದೆ ಎಂದು ಬೀಗುತ್ತಿದ್ದ ಕೋಚ್ ರವಿಶಾಸ್ತ್ರಿ ಮತ್ತು ಕೊಹ್ಲಿ ಜೋಡಿಗೆ ಮುಖಭಂಗವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ