ಢಾಕಾ: ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ವಾಪಸ್ ಕಳುಹಿಸುವಂತೆ ಭಾರತಕ್ಕೆ ರಾಜತಾಂತ್ರಿಕ ಸಂದೇಶವನ್ನು ರವಾನಿಸಲಾಗಿದೆ. ಈ ಸಂಬಂಧ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಸೋಮವಾರ ಹೇಳಿದೆ.
ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು 77 ವರ್ಷದ ಹಸೀನಾ ಸೇರಿದಂತೆ ಮಾಜಿ ಸಚಿವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಬಂಧನ ವಾರಂಟ್‌ಗಳನ್ನು ಹೊರಡಿಸಿದೆ.
ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿ ಶೇಖ್ ಹಸೀನಾ ಅವರನ್ನು ಢಾಕಾಗೆ ವಾಪಸ್ ಕಳುಹಿಸಲು ಕೋರಿ ಭಾರತ ಸರ್ಕಾರಕ್ಕೆ ಮೌಖಿಕ ಸಂದೇಶ ಕಳುಹಿಸಲಾಗಿದೆ ಎಂದು ವಿದೇಶಾಂಗ ಸಚಿವ ತೌಹಿದ್ ಹುಸೇನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಗೃಹ ಸಚಿವ ಜಹಾಂಗೀರ್ ಆಲಂ ಅವರು ಭಾರತಕ್ಕೆ ಪತ್ರ ಬರೆದಿದ್ದು, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಮನವಿ ಮಾಡಿದ್ದರು.
ಢಾಕಾ ಮತ್ತು ನವದೆಹಲಿ ನಡುವೆ ಹಸ್ತಾಂತರ ಒಪ್ಪಂದವು ಈಗಾಗಲೇ ಅಸ್ತಿತ್ವದಲ್ಲಿದೆ. ಹಾಗಾಗಿ ಒಪ್ಪಂದದ ಭಾಗವಾಗಿ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಮರಳಿ ಕರೆತರಬಹುದು ಎಂದು ಆಲಂ ಹೇಳಿದ್ದಾರೆ.