ಬಿಜೆಪಿಗೆ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ಮಕ್ಕಳು ಬರ್ತಾರೆ : ಕಟೀಲ್ ವ್ಯಂಗ್ಯ
ಮಂಗಳವಾರ, 31 ಜನವರಿ 2023 (14:34 IST)
ಬೆಂಗಳೂರು : ಕಾಂಗ್ರೆಸ್ ಬಸ್ ಹೊರಟಿದೆ. ಹೋಗ್ತಾ, ಹೋಗ್ತಾ ಬ್ರೇಕ್ಫೇಲ್ ಆಗುತ್ತಿದೆ. ಇನ್ನೊಂದು ಪಂಚರತ್ನ ಯಾತ್ರೆ ಆರಂಭವಾಗಿದೆ. ವಿಜಾಪುರ ತಲುಪುವಾಗ ಹಾಸನದಲ್ಲಿ ಪಂಕ್ಚರ್ ಹಾಕುವ ಪ್ರಯತ್ನಗಳು ಪ್ರಾರಂಭವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ್ ಭವನದಲ್ಲಿ ಇಂದು (ಸೋಮವಾರ) ಕಾಂಗ್ರೆಸ್- ಜೆಡಿಎಸ್ ಮುಖಂಡರ ಮತ್ತು ಬೆಂಬಲಿಗರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಕಾಂಗ್ರೆಸ್ ಮತ್ತು ಜೆಡಿಎಸ್ ಯಾತ್ರೆಗಳು ಮುಂದಿನ ಚುನಾವಣೆವರೆಗೆ ಪೂರ್ತಿ ಆಗುವುದಿಲ್ಲ. ಆದರೆ, ಬಿಜೆಪಿ ಸಂಕಲ್ಪ ಯಾತ್ರೆ ವಿಜಯಿ ಯಾತ್ರೆಯಾಗಿ ಪರಿವರ್ತನೆ ಹೊಂದುತ್ತಿದೆ. ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆದ್ದೇಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ಬದಲಾವಣೆ ಕೇವಲ ವಾಸು ಅವರ ಮನೆಯಲ್ಲಿ ಆಗಿಲ್ಲ. ಒಬ್ಬ ಕಾಂಗ್ರೆಸ್ ಶಾಸಕನ ಮನೆಯಲ್ಲಿ ಅವರ ಮಗ ಬಿಜೆಪಿ ಸೇರಿದಂತೆ, ಮುಂದಿನ ದಿನದಲ್ಲಿ ಸಿದ್ರಾಮಣ್ಣನ ಮಗನೂ, ಖರ್ಗೆ ಅವರ ಮಗನೂ, ಡಿಕೆಶಿ ಮನೆಯಿಂದಲೂ ಬಿಜೆಪಿಗೆ ಬರುತ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಡಬಲ್ ಎಂಜಿನ್ ಸರ್ಕಾರ ರಚಿಸಿ ಅಭಿವೃದ್ಧಿಯ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.