ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಕೈವಾಡವಿದೆ ಎಂದಿದ್ದ ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ತಮಿಳುನಾಡು ಕಾಂಗ್ರೆಸ್ ಸಂಸದ, ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಆದರೆ ಇಂತಹದ್ದಕ್ಕೆಲ್ಲಾ ನಾನು ಹೆದರಲ್ಲ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಪ್ರಕರಣದಲ್ಲಿ ಸಸಿಕಾಂತ್ ಸೆಂಥಿಲ್ ಕೈವಾಡವಿದೆ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದರು. ಈ ಹೇಳಿಕೆ ಭಾರೀ ಸಂಚಲನ ಮೂಡಿಸಿತ್ತು. ಈ ಬಗ್ಗೆ ಅವರು ಜನಾರ್ಧನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜನಾರ್ಧನ ರೆಡ್ಡಿ ಇಂತಹದ್ದೆಲ್ಲಾ ಬೇಕಾದಷ್ಟು ನೋಡಿದ್ದೇನೆ. ಕರಾವಳಿ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದೆ. ಇದಕ್ಕೇ ಎಡಪಂಥೀಯ ವಿಚಾರಧಾರೆ ಇರುವ ಸೆಂಥಿಲ್ ಇಲ್ಲಿ ಸಮಾಜ ಒಡೆಯುವುದಕ್ಕೆ ಸಂಚು ರೂಪಿಸಿದ್ದಾರೆ ಎಂದಿದ್ದಾರೆ.
ಸೆಂಥಿಲ್ ಸೂಚನೆ ಬಳಿಕವೇ ಸಿದ್ದರಾಮಯ್ಯನವರು ಎಸ್ಐಟಿ ತನಿಖೆಗೆ ಆದೇಶಿಸಿದ್ದರು. ಹೀಗಾಗಿ ಇಡೀ ಘಟನೆಯ ಹಿಂದೆ ಸೆಂಥಿಲ್ ಕೈವಾಡವಿದೆ. ಒಂದು ವೇಳೆ ಅವರು ಪ್ರಾಮಾಣಿಕರಾಗಿದ್ದರೆ ಸಿಎಂ ಬಳಿ ಮಾತನಾಡಿ ಸಿಬಿಐ, ಎನ್ಐಎಗೆ ಪ್ರಕರಣ ವಹಿಸಲಿ ಎಂದಿದ್ದಾರೆ. ಇದೀಗ ಜನಾರ್ಧನ ರೆಡ್ಡಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆ ಸೆಪ್ಟೆಂಬರ್ 11 ಕ್ಕೆ ನಡೆಯಲಿದೆ.