ನವದೆಹಲಿ: ಉದ್ಯೋಗ ಖಾತ್ರಿಗಾಗಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ನರೇಗಾ ಜಾಬ್ ಕಾರ್ಡ್ ಕೂಡಾ ಒಂದು. ನರೇಗಾ ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ, ಯಾವೆಲ್ಲಾ ದಾಖಲೆಗಳು ಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.
ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರತಿಯೊಬ್ಬರಿಗೂ ಉದ್ಯೋಗ ಭರವಸೆ ನೀಡುವ ಉದ್ದೇಶದಿಂದ 2005 ರಲ್ಲಿ ನರೇಗಾ ಜಾಬ್ ಕಾರ್ಡ್ ಜಾರಿಗೆ ತಂದಿತ್ತು.ಈ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ 100 ದಿನಗಳ ಉದ್ಯೋಗ ಖಾತ್ರಿಯನ್ನು ನೀಡಲಾಗುತ್ತದೆ. ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಇದರಿಂದ ಅನುಕೂಲವಾಗುತ್ತದೆ. ಇಂತಹ ಕುಟುಂಬಗಳು ನರೇಗಾ ಜಾಬ್ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿದಾರರು ಮೊದಲು ಅರ್ಜಿ ಸಲ್ಲಿಸಿ ಬಳಿಕ ತಮ್ಮ ಜಾಬ್ ಕಾರ್ಡ್ ಸ್ಥಿತಿಯನ್ನು ಆನ್ ಲೈನ್ ನಲ್ಲೇ ಪರಿಶೀಲಿಸಬಹುದು. 100 ದಿನಗಳ ಉದ್ಯೋಗ ಸಿಗದೇ ಇದ್ದರೆ ನಿಮಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ. ಉದ್ಯೋಗದ ಜೊತೆಗೆ ಎಲ್ಲಾ ರೀತಿಯ ಸರ್ಕಾರೀ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ನರೇಗಾ ಜಾಬ್ ಕಾರ್ಡ್ ಇದ್ದರೆ ಆರೋಗ್ಯ ವಿಮೆ ಪಡೆಯಬಹುದು. ಪಿಎಂ ಆವಾಸ್ ಯೋಜನೆಯ ಪ್ರಯೋಜನ ಪಡೆಯಬಹುದು. ನರೇಗಾ ಜಾಬ್ ಕಾರ್ಡ್ ಪಡೆಯಲು 18 ವರ್ಷ ಮೇಲ್ಪಟ್ಟ ವಯಸ್ಸಿನರಾಗಿರಬೇಕು. ಅಲ್ಲದೆ ಭಾರತೀಯ ಪ್ರಜೆಯಾಗಿರಬೇಕು. ಅಭ್ಯರ್ಥಿಯ ಯಾವುದೇ ಕುಟುಂಬಸ್ಥರು ಸರ್ಕಾರೀ ಉದ್ಯೋಗಸ್ಥರಾಗಿರಬಾರದು. ಇದಕ್ಕೆ ಜಾತಿ, ಧರ್ಮದ ಬೇಧವಿಲ್ಲ.
ಯಾವೆಲ್ಲಾ ದಾಖಲೆಗಳು ಬೇಕು
ಆಧಾರ್ ಕಾರ್ಡ್, ಗುರುತಿನ ಚೀಟಿ, ಪಡಿತರ ಚೀಟಿ, ನಿವಾಸ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಪಾಸ್ ಬುಕ್ ಮತ್ತು ಪಾಸ್ ಪೋರ್ಟ್ ಗಾತ್ರದ ಫೋಟೋ ಬೇಕಾಗುತ್ತದೆ.
ಅರ್ಜಿ ಎಲ್ಲಿ ಸಲ್ಲಿಸಬೇಕು
ನರೇಗಾ ಜಾಬ್ ಕಾರ್ಡ್ ಗೆ ಆನ್ ಲೈನ್ ಮೂಲಕ https://nrega.nic.in/MGNREGA_new/Nrega_home.aspx ಎಂಬ ವೆಬ್ ಸೈಟ್ ಗೆ ತೆರಳಿ ಅರ್ಜಿ ಸಲ್ಲಿಸಬಹುದು. ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಾದರೆ ನಿಮ್ಮ ಪಕ್ಕದ ಗ್ರಾಮಪಂಚಾಯಿತಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ನಮೂನೆ ದೊರೆಯುತ್ತದೆ. ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ನೀಡಬೇಕು. ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಆನ್ ಲೈನ್ ನಲ್ಲಿ ವೀಕ್ಷಿಸಬಹುದಾಗಿದೆ.