ಸಂಜೆಯ ಲಘು ಉಪಹಾರಕ್ಕಾಗಿ ಬ್ರೆಡ್ ಕಟ್ಲೆಟ್

ನಾಗಶ್ರೀ ಭಟ್

ಶುಕ್ರವಾರ, 15 ಡಿಸೆಂಬರ್ 2017 (15:08 IST)
ಬ್ರೆಡ್ ಕಟ್ಲೆಟ್ ನೀವೇ ಸರಳವಾಗಿ ಮಾಡಿಕೊಳ್ಳಬಹುದಾದ ತಿಂಡಿ. ಯಾವಾಗಲೂ ಹೋಟೆಲಿನಲ್ಲಿ ತಿನ್ನುವುದು ಅಥವಾ ರಸ್ತೆಬದಿಯ ಅಂಗಡಿಗಳಲ್ಲಿ ತಿನ್ನುವುದಕ್ಕಿಂತ ಇದನ್ನು ನೀವೇ ಮನೆಯಲ್ಲಿ ಮಾಡಿಕೊಳ್ಳಬಹುದು. ಆರೋಗ್ಯಕ್ಕೂ ಇದರಿಂದ ಯಾವುದೇ ಹಾನಿಯಿಲ್ಲ. ಸಾಯಂಕಾಲದ ಸಮಯದಲ್ಲಿ ಟೀ ಅಥವಾ ಕಾಫಿಯ ಜೊತೆ ಇದು ಹಿತವಾಗಿರುತ್ತದೆ. ಹೇಗೆ ಮಾಡೋದು ಅಂತಾ ತಿಳಿದುಕೊಳ್ಳಬೇಕಿದ್ರೆ ಇಲ್ಲಿ ನೋಡಿ,
ಬೇಕಾಗುವ ಸಾಮಗ್ರಿಗಳು:
 
ಬ್ರೆಡ್ ಸ್ಲೈಸ್ - 7-8
ಬೇಯಿಸಿದ ಆಲೂಗಡ್ಡೆ(ಕ್ಯಾರೆಟ್,ಹಸಿರು ಬಟಾಣಿ, ಬೀನ್ಸ್..) - 2
ಸಾಸಿವೆ - 1/2 ಚಮಚ
ಹೆಚ್ಚಿದ ಹಸಿಮೆಣಸು - 2
ಇಂಗು - ಚಿಟಿಕೆ
ಅಚ್ಚ ಖಾರದ ಪುಡಿ - 1 ಚಮಚ
ಕರಿಬೇವು - ಸ್ವಲ್ಪ
ಶುಂಠಿ ಪೇಸ್ಟ್ - 1/2 ಚಮಚ
ಗರಂಮಸಾಲಾ - 1/2 ಚಮಚ
ಅರಿಶಿಣ - 1 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು - ಸ್ವಲ್ಪ
ಕಡಲೆ ಹಿಟ್ಟು - 1 ಕಪ್
ಅಕ್ಕಿ ಹಿಟ್ಟು - 3-4 ಚಮಚ
ಅಡುಗೆ ಸೋಡಾ - 1/2 ಚಮಚ
ವಾಮಕಾಳು(ಅಜ್ವೈನ್) - 1/2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ನೀರು - ಅಗತ್ಯವಿರುವಷ್ಟು
ಎಣ್ಣೆ - ಕರಿಯಲು
 
ಮಾಡುವ ವಿಧಾನ:
 
* ಒಂದು ಬಾಣೆಲೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ 1/2 ಚಮಚ ಸಾಸಿವೆಯನ್ನು ಹಾಕಿ. ನಂತರ ಅದಕ್ಕೆ 1/2 ಚಮಚ ಶುಂಠಿ ಪೇಸ್ಟ್, 2 ಹಸಿಮೆಣಸು ಮತ್ತು ಕರಿಬೇವಿನ ಎಲೆಯನ್ನು ಹಾಕಿ ಅದರ ಘಮ ಬರುವವರೆಗೂ ಹುರಿದುಕೊಂಡು ಸ್ಟೌ ಆಫ್ ಮಾಡಿ.
 
* ಹುರಿದ ಮಿಶ್ರಣಕ್ಕೆ 1/2 ಚಮಚ ಖಾರದ ಪುಡಿ, 1/2 ಚಮಚ ಅರಿಶಿಣ, ಸ್ವಲ್ಪ ಇಂಗು, ಮತ್ತು 1/2 ಚಮಚ ಗರಂಮಸಾಲಾವನ್ನು ಸೇರಿಸಿ.
 
* ಈ ಮೊದಲೇ ಬೇಯಿಸಿ ಚೆನ್ನಾಗಿ ಸ್ಮ್ಯಾಶ್ ಮಾಡಿರುವ ಆಲೂಗಡ್ಡೆ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಮೇಲಿನ ಮಿಶ್ರಣಕ್ಕೆ ಸೇರಿಸಿ ಅದನ್ನು ಆರಲು ಬಿಡಿ.
 
* ಒಂದು ಬೌಲ್‌ ತೆಗೆದುಕೊಂಡು ಅದರಲ್ಲಿ 1 ಕಪ್ ಕಡಲೆ ಹಿಟ್ಟು, ಉಪ್ಪು, 1/2 ಚಮಚ ವಾಮಕಾಳು, 1/2 ಚಮಚ ಅಚ್ಚಖಾರದ ಪುಡಿ, 4 ಚಮಚ ಅಕ್ಕಿ ಹಿಟ್ಟು, ಚಿಟಿಕೆ ಅರಿಶಿಣ ಪುಡಿ, 1/2 ಚಮಚ ಅಡುಗೆ ಸೋಡಾ ಮತ್ತು ಅಗತ್ಯವಿರುವಷ್ಟು ನೀರನ್ನು ಸೇರಿಸಿ ಹಿಟ್ಟನ್ನು ರೆಡಿ ಮಾಡಿಕೊಳ್ಳಿ. ಈ ಹಿಟ್ಟು ದೋಸೆ ಹಿಟ್ಟಿನಂತಿರಲಿ.
 
* ಒಂದು ಬ್ರೆಡ್ ತೆಗೆದುಕೊಂಡು ಅದರ ಮೇಲೆ ಈ ಮೊದಲೇ ಮಾಡಿಟ್ಟಿರುವ ಮಿಶ್ರಣವನ್ನು ಹಾಕಿ ಮೇಲೆ ಇನ್ನೊಂದು ಬ್ರೆಡ್‌ನಿಂದ ಪ್ರೆಸ್ ಮಾಡಿ ಅದನ್ನು ಮೇಲೆ ರೆಡಿ ಮಾಡಿರುವ ಹಿಟ್ಟಿನಲ್ಲಿ ಅದ್ದಿ ಹೊಂಬಣ್ಣ ಬರುವವರೆಗೂ ಕಾದ ಎಣ್ಣೆಯಲ್ಲಿ ಕರಿದರೆ ಬ್ರೆಡ್ ಕಟ್ಲೆಟ್ ರೆಡಿಯಾಗುತ್ತದೆ. ನಿಮಗೆ ತುಂಬಾ ಕಡಿಮೆ ಸಮಯವಿದ್ದರೆ ಕೇವಲ ತುಪ್ಪ/ಎಣ್ಣೆ ಹಾಕಿ ಸ್ವಲ್ಪ ರೋಸ್ಟ್ ಮಾಡಿರುವ ಬ್ರೆಡ್ ಅನ್ನು ಹಿಟ್ಟಿನಲ್ಲಿ ಅದ್ದಿ ಕರಿದುಕೊಳ್ಳಬಹುದು.
 
* ಕರಿದಿರುವ ಕಟ್ಲೆಟ್‌ಗಳನ್ನು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಕಟ್ ಮಾಡಿ ಟೊಮೆಟೋ ಸಾಸ್ ಮತ್ತು ಕೊತ್ತಂಬರಿ ಸೂಪ್ಪಿನ ಚಟ್ನಿಯ ಜೊತೆ ಸರ್ವ್ ಮಾಡಿ.
 
ಇಷ್ಟೊಂದು ಸರಳವಾಗಿ ಮಾಡಲು ಸಾಧ್ಯವಿರುವ ಈ ತಿಂಡಿಯನ್ನು ನೀವೂ ಒಮ್ಮೆ ಪ್ರಯತ್ನಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ