ರುಚಿರುಚಿಯಾಗಿ ಜಿಲೇಬಿ ಮಾಡುವ ಬಗೆ

ಗುರುವಾರ, 14 ಫೆಬ್ರವರಿ 2019 (15:20 IST)
ಸಿಹಿ ತಿಂಡಿಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲಿಯೂ ಹಬ್ಬ ಹರಿದಿನಗಳಲ್ಲಿ ವಿಶೇಷ ದಿನಗಳಲ್ಲಿ ಸಿಹಿ ತಿಂಡಿ ಇಲ್ಲದೇ ದಿನವು ಸಂಪೂರ್ಣವಾಗುವುದೇ ಕಷ್ಟ. ಹಾಗಾಗಿ ದಿಡೀರ್ ಎಂದು ಜಿಲೇಬಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.. 
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಸಕ್ಕರೆ 1 ಬಟ್ಟಲು
* ನೀರು ಅರ್ಧ ಕಪ್
* ನಿಂಬೆರಸ ಅರ್ಧ ಹೋಳು
* ಏಲಕ್ಕಿ ಪುಡಿ ಕಾಲು ಚಮಚ
* ಕೇಸರಿ ಸ್ವಲ್ಪ
* ಮೈದಾ ಹಿಟ್ಟು 1 ಬಟ್ಟಲು
* ಕಾರ್ನ್ ಫ್ಲೋರ್ ಹಿಟ್ಟು 1 ಚಮಚ
* ಮೊಸರು ಅರ್ಧ ಕಪ್
* ವಿನೆಗರ್ ಅರ್ಧ ಚಮಚ
* ಕರಿಯಲು ಸಾಕಾಗುವಷ್ಟು ಎಣ್ಣೆ
 
ತಯಾರಿಸುವ ವಿಧಾನ:
 
ಮೊದಲು ಒಲೆಯ ಮೇಲೆ ಮೀಡಿಯಂ ಉರಿಯಲ್ಲಿ ಒಂದು ಪಾತ್ರೆಗೆ ಸಕ್ಕರೆ ಮತ್ತು ನೀರನ್ನು ಹಾಕಿ ಕುದಿಸಬೇಕು. ಸಕ್ಕರೆಯು ಕರಗಿ ಕುದಿಯುವಾಗ ಅದಕ್ಕೆ ನಿಂಬೆ ರಸ, ಏಲಕ್ಕಿ ಪುಡಿ, ಕೇಸರಿ ದಳಗಳನ್ನು ಹಾಕಿ ಒಂದೆಳೆ ಪಾಕವನ್ನು ಮಾಡಿ ಮುಚ್ಚಿಡಬೇಕು. ನಂತರ ಒಂದು ಅಗಲವಾದ ಬಟ್ಟಲಲ್ಲಿ ಮೈದಾ ಹಿಟ್ಟನ್ನು ಹಾಕಿ ಅದರ ಜೊತೆ ಕಾರ್ನ್‌ಫ್ಲೋರ್, ಬೇಕಿಂಗ್ ಪೌಡರ್, ವಿನೆಗರ್, ಮೊಸರು ಹಾಕಿ ಮಿಕ್ಸ್ ಮಾಡಬೇಕು. ನಮತರ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಗಟ್ಟಿಯಾಗಿ ದೋಸೆ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲೆಸಬೇಕು.  
 
ನಂತರ ಒಲೆಯ ಮೇಲೆ ಮೀಡಿಯಂ ಉರಿಯಲ್ಲಿ ಎಣ್ಣೆಯನ್ನು ಕಾಯಲು ಇಡಬೇಕು. ನಂತರ ಜಿಲೇಬಿ ಮಾಡುವ ಪಾತ್ರೆ (ಇದ್ದರೆ) ಅದರಲ್ಲಿ ಅಥವಾ ಒಂದು ಪ್ಲಾಸ್ಟಿಕ್ ಕವರ್ ಅನ್ನು ಕೋನ್ ರೀತಿಯಾಗಿ ಮಾಡಿ ತುದಿಯಲ್ಲಿ ಸಣ್ಣದಾಗಿ ಕಟ್ ಮಾಡಿ ಕಾದ ಎಣ್ಣೆಯಲ್ಲಿ ಜಿಲೇಬಿ ಆಕಾರದಲ್ಲಿ ಒತ್ತಿ ಎರಡೂ ಕಡೆ ಒಂದು ನಿಮಿಷ ಬೇಯಿಸಬೇಕು. ನಂತರ ಅದನ್ನು ತೆಗೆದು ಈಗಾಗಲೇ ಸಿದ್ಧವಾದ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಬೇಕು. ಈಗ ರುಚಿ ರುಚಿಯಾದ ಜಿಲೇಬಿ ಸವಿಯಲು ಸಿದ್ಧ, ಅದರ ಮೇಲೆ ಬೇಕಾದಲ್ಲಿ ಬಾದಾಮಿ, ಪಿಸ್ತಾ ಚೂರುಗಳನ್ನು ಉದುರಿಸಬಹುದು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ