ಊಟದ ಜೊತೆ ರುಚಿಯಾದ ಮಾವಿನಕಾಯಿ ಪದಾರ್ಥಗಳು...!!!

ನಾಗಶ್ರೀ ಭಟ್

ಶುಕ್ರವಾರ, 29 ಡಿಸೆಂಬರ್ 2017 (12:15 IST)
ಮಾವಿನಕಾಯಿ ಎಂದರೇ ಬಾಯಲ್ಲಿ ನೀರೂರುತ್ತದೆ. ಮಾವಿನ ಹಣ್ಣೊಂದೇ ತಿನ್ನಲು ಬಳಕೆಯಾಗುವುದಿಲ್ಲ ಬದಲಿಗೆ ಮಾವಿನಕಾಯಿಯನ್ನು ಬಳಸಿಕೊಂಡು ಹಲವಾರು ಬಗೆಯ ಪದಾರ್ಥಗಳನ್ನು ಮಾಡಬಹುದು. ಉದಾ: ಉಪ್ಪಿನಕಾಯಿ, ಪಲ್ಯ, ಚಟ್ನಿ, ಗೊಜ್ಜು ಇತ್ಯಾದಿ, ಅದರಲ್ಲೂ ಮಾವಿನಕಾಯಿ ಉಪ್ಪಿನಕಾಯಿ ಬಹಳ ಜನಪ್ರಿಯವಾಗಿದೆ.

ಇದರ ಜೊತೆಗೆ ಪಲ್ಯ, ಗೊಜ್ಜು, ಚಟ್ನಿ ಮುಂತಾದವನ್ನೂ ಸಹ ಮಾಡಬಹುದು. ಮಾವಿನಕಾಯಿ ಪದಾರ್ಥಗಳು ಊಟದಲ್ಲಿ ಅನ್ನದ ಜೊತೆ ತುಂಬಾ ರುಚಿಯಾಗಿರುತ್ತದೆ ಮತ್ತು ಈ ಪದಾರ್ಥಗಳನ್ನು ಮಾಡುವುದೂ ಬಹಳ ಸುಲಭ. ಹೇಗೆ ಎಂದು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಲೇಖನವನ್ನು ಓದಿ.
 
1. ಮಾವಿನಕಾಯಿ ಚಟ್ನಿ:
 
ಬೇಕಾಗುವ ಸಾಮಗ್ರಿಗಳು:
 
ಕಾಯಿತುರಿ - 1 ಕಪ್
ಹೆಚ್ಚಿದ ಮಾವಿನಕಾಯಿ - 1/2 ಕಪ್
ಹುರಿಗಡಲೆ - 2-3 ಚಮಚ
ಹಸಿಮೆಣಸು - 2-3
ಇಂಗು - 1/4 ಚಮಚ
ಉದ್ದಿನ ಬೇಳೆ - 1 ಚಮಚ
ಸಾಸಿವೆ - 1 ಚಮಚ
ಒಣಮೆಣಸು - 1
ಕರಿಬೇವು - ಸ್ಪಲ್ಪ
ಉಪ್ಪು - ರುಚಿಗೆ ತಕ್ಕಷ್ಟು
 
ಮಾಡುವ ವಿಧಾನ:
 
* ಕಾಯಿತುರಿ, ಹೆಚ್ಚಿರುವ ಮಾವಿನಕಾಯಿ, ಚಮಚ ಹುರಿದ ಕಡಲೆ ಬೇಳೆ, ಹಸಿಮೆಣಸು, ಚಿಟಿಕೆ ಇಂಗು, ಸ್ವಲ್ಪ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
 
* ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಸಾಸಿವೆ, ಉದ್ದಿನ ಬೇಳೆ, ಇಂಗು, ಒಣಮೆಣಸು ಮತ್ತು ಸ್ವಲ್ಪ ಕರಿಬೇವನ್ನು ಹಾಕಿ ಒಗ್ಗರಣೆಯನ್ನು ರೆಡಿಮಾಡಿಕೊಂಡು ಅದನ್ನು ರುಬ್ಬಿದ ಮಿಶ್ರಣಕ್ಕೆ ಹಾಕಿದರೆ ಮಾವಿನಕಾಯಿ ಚಟ್ನಿ ರೆಡಿ.
 
* ನಿಮ್ಮ ರುಚಿಗೆ ತಕ್ಕಹಾಗೆ ಉಪ್ಪು, ಖಾರ ಮತ್ತು ಹುಳಿಯನ್ನು ಸೇರಿಸಿಕೊಳ್ಳಬೇಕು.
 
* ಇದು ಬಿಸಿ ಬಿಸಿಯಾದ ಅನ್ನದ ಜೊತೆ ರುಚಿಯಾಗಿರುತ್ತದೆ. ಇದನ್ನು ದೋಸೆ, ಇಡ್ಲಿ, ಚಪಾತಿಯೊಂದಿಗೂ ತಿನ್ನಬಹುದು.
 
2. ಮಾವಿನಕಾಯಿ ಪಲ್ಯ:
 
ಬೇಕಾಗುವ ಸಾಮಗ್ರಿಗಳು:
 
ತುರಿದ ಮಾವಿನಕಾಯಿ - 2 ಕಪ್
ಕಾಯಿತುರಿ - 1/4 ಕಪ್
ಹೆಚ್ಚಿದ ಹಸಿಮೆಣಸು - 2
ಕಡಲೆಬೇಳೆ - 1 ಚಮಚ
ಸಾಸಿವೆ - 1 ಚಮಚ
ಒಣ ಮೆಣಸು - 1-2
ಅರಿಶಿಣ - 1/2 ಚಮಚ
ಇಂಗು - 1/4 ಚಮಚ
ಕರಿಬೇವು - ಸ್ವಲ್ಪ
ಎಣ್ಣೆ - 4-5 ಚಮಚ
ಉಪ್ಪು - ರುಚಿಗೆ
ಬೆಲ್ಲ - 1 ಚಮಚ
 
ಮಾಡುವ ವಿಧಾನ:
 
* ಮಾವಿನಕಾಯಿ ಅಗತ್ಯಕ್ಕಿಂತ ಹುಳಿಯಾಗಿದ್ದರೆ ತುರಿದ ಮಾವಿನಕಾಯಿಗೆ 1 ಕಪ್ ನೀರು ಸೇರಿಸಿ 1 ಗಂಟೆ ನೆನೆಸಿಟ್ಟು ನಂತರ ಅದನ್ನು ಚೆನ್ನಾಗಿ ಹಿಂಡಿ ನೀರಿನ ಅಂಶವನ್ನು ತೆಗೆಯಿರಿ.
 
* ಒಂದು ಬಾಣಲೆಯಲ್ಲಿ 5-6 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಕಡಲೆಬೇಳೆ, ಸಾಸಿವೆ, ಒಣ ಮೆಣಸು, ಅರಿಶಿಣ, ಕರಿಬೇವು ಮತ್ತು ಇಂಗನ್ನು ಹಾಕಿ ಒಗ್ಗರಣೆ ರೆಡಿಮಾಡಿಕೊಂಡು ಅದಕ್ಕೆ ತುರಿದ ಮಾವಿನಕಾಯಿಯನ್ನು ಹಾಕಿ ಚಿಕ್ಕ ಉರಿಯಲ್ಲಿ 5-6 ನಿಮಿಷ ಹುರಿಯಿರಿ.
 
* ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸಮಾಡಿ. ಬೇಯಲು ಅಗತ್ಯವಿದ್ದರೆ ಸ್ವಲ್ಪ ನೀರನ್ನು ಚಿಮುಕಿಸಿ ಮಾವಿನಕಾಯಿ ಬೆಂದಾಗ ಉರಿಯನ್ನು ಆಫ್ ಮಾಡಿದರೆ ಮಾವಿನಕಾಯಿ ಪಲ್ಯ ರೆಡಿ.
 
* ಹೀಗೆ ರೆಡಿಯಾದ ಪಲ್ಯಕ್ಕೆ ಕಾಯಿತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಊಟದ ಜೊತೆಯಲ್ಲಿ ರುಚಿಯಾಗಿರುತ್ತದೆ.
 
3. ಮಾವಿನಕಾಯಿ ಗೊಜ್ಜು:
 
ಬೇಕಾಗುವ ಸಾಮಗ್ರಿಗಳು:
 
ಮಾವಿನಕಾಯಿ - 1
ಕಾಯಿತುರಿ - 1 ಕಪ್
ಸಾಸಿವೆ - 3-4 ಚಮಚ
ಕೊತ್ತಂಬರಿ - 1 ಚಮಚ
ಕಡಲೆ ಬೇಳೆ - 1-2 ಚಮಚ
ಒಣ ಮೆಣಸು - 5-6
ಅರಿಶಿಣ - 1/2 ಚಮಚ
ಇಂಗು - 1/4 ಚಮಚ
ಕರಿಬೇವು - ಸ್ವಲ್ಪ
ಎಣ್ಣೆ - 2-3 ಚಮಚ
ಉಪ್ಪು - ರುಚಿಗೆ
ಬೆಲ್ಲ - 2 ಚಮಚ
 
ಮಾಡುವ ವಿಧಾನ:
 
* ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಕಟ್ ಮಾಡಿಕೊಳ್ಳಿ. ಮಾವಿನಕಾಯಿ, ಉಪ್ಪು, ಬೆಲ್ಲ ಮತ್ತು ಸ್ವಲ್ಪ ನೀರನ್ನು ಸೇರಿಸಿ ಬೇಯಿಸಿ ಅದನ್ನು ಸ್ವಲ್ಪ ಆರಲು ಬಿಡಿ.
 
* ಒಂದು ಪ್ಯಾನ್ ತೆಗೆದುಕೊಂದು ಅದರಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಕಡಲೆ ಬೇಳೆ, 2 ಚಮಚ ಸಾಸಿವೆ, ಕೊತ್ತಂಬರಿ, ಮೆಣಸು, ಇಂಗು, ಅರಿಶಿಣವನ್ನು ಕ್ರಮವಾಗಿ ಹಾಕಿ ಒಗ್ಗರಣೆಯನ್ನು ಮಾಡಿಕೊಳ್ಳಿ.
 
* ಮಿಕ್ಸಿ ಜಾರ್‌ಗೆ ಬೇಯಿಸಿದ ಮಾವಿನಕಾಯಿ ಹೋಳುಗಳು, ಕಾಯಿತುರಿ, ಅಗತ್ಯವಿರುವಷ್ಟು ಉಪ್ಪು, 1/4 ಕಪ್ ನೀರು ಮತ್ತು ಮೇಲೆ ಮಾಡಿಟ್ಟುಕೊಂಡಿರುವ ಒಗ್ಗರಣೆಯನ್ನು ಸೇರಿಸಿಕೊಂಡು ರುಬ್ಬಿ.
 
* ಒಂದು ಪ್ಯಾನ್ ತೆಗೆದುಕೊಂದು ಅದರಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ 1 ಚಮಚ ಸಾಸಿವೆ, ಇಂಗು, ಕರಿಬೇವು ಮತ್ತು 1 ಮೆಣಸನ್ನು ಹಾಕಿ ಒಗ್ಗರಣೆಯನ್ನು ಮಾಡಿಕೊಂಡು ರುಬ್ಬಿದ ಮಿಶ್ರಣಕ್ಕೆ ಹಾಕಿದರೆ ಮಾವಿನಕಾಯಿ ಗೊಜ್ಜು ರೆಡಿ. ಗೊಜ್ಜು ಸ್ವಲ್ಪ ದೋಸೆ ಹಿಟ್ಟಿನ ಹದದಲ್ಲಿರಬೇಕು.
 
* ಬಿಸಿ ಬಿಸಿಯಾದ ಅನ್ನಕ್ಕೆ ಮಾವಿನಕಾಯಿ ಗೊಜ್ಜಿನ ಜೊತೆ 1 ಚಮಚ ಕೊಬ್ಬರಿ ಎಣ್ಣೆ ಹಾಕಿಕೊಂಡು ತಿಂದರೆ ಇನ್ನೂ ರುಚಿಯಾಗಿರುತ್ತದೆ.
 
ಹೀಗೆ ಮಾವಿನಕಾಯಿಯಿಂದ ಹಲವಾರು ಬಗೆಯ ಪದಾರ್ಥಗಳನ್ನು ಸರಳವಾಗಿ ಮಾಡಿಕೊಂಡು ಸವಿಯಬಹುದು. ನೀವೂ ಒಮ್ಮೆ ಪ್ರಯತ್ನಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ