ರುಚಿ ರುಚಿಯಾದ ಕುಂದಾಪುರ ಸ್ಟೈಲ್ ಮರುವಾಯಿ ಪಲ್ಯ ಮಾಡುವುದು ಹೇಗೆಂದು ತಿಳಿಯಬೇಕಾ?
ಭಾನುವಾರ, 31 ಡಿಸೆಂಬರ್ 2017 (07:21 IST)
ಬೆಂಗಳೂರು: ಸಮುದ್ರದಲ್ಲಿ ಸಿಗುವ ಮೀನು, ಏಡಿ, ಸಿಗಡಿ ಮಾಂಸಗಳನ್ನು ಬಳಸಿಕೊಂಡು ಅಡುಗೆ ಮಾಡಿದರೆ ಅದು ತುಂಬಾ ರುಚಿಯಾಗಿರುತ್ತದೆ. ಅದರ ಜೊತೆ ಸಮುದ್ರದಲ್ಲಿ ಸಿಗುವ ಮರುವಾಯಿ ಕೂಡ ಪಲ್ಯ ಮಾಡಿದರೆ ಅದು ತುಂಬಾನೆ ರುಚಿಯಾಗಿರುತ್ತದೆ. ಇದನ್ನು ಹೇಗೆ ಪಲ್ಯ ಮಾಡಬೇಕು ಎಂಬುವುದು ಕೆಲವರಿಗೆ ತಿಳಿದಿರುವುದಿಲ್ಲ. ಅದನ್ನು ಹೇಗೆ ಪಲ್ಯಮಾಡುವುದು ಎಂಬುದು ಇಲ್ಲಿದೆ ನೋಡಿ.
ಬೇಕಾಗಿರುವ ಸಾಮಾಗ್ರಿಗಳು:
½ ಕೆಜಿ ಮರುವಾಯಿ(ಅದನ್ನು ಒಡೆದು ತೊಳೆದಿಟ್ಟುಕೊಳ್ಳಿ), ಬೆಳ್ಳುಳ್ಳಿ- 4 ಎಸಳು, ಹೆಚ್ಚಿದ ಈರುಳ್ಳಿ- 1, ಹೆಚ್ಚಿದ ಹಸಿಮೆಣಸಿನ ಕಾಯಿ-2, ಹೆಚ್ಚಿದ ಟೊಮೆಟೊ-2, ತೆಂಗಿನಕಾಯಿ ತುರಿ - 1 ಕಪ್, ಧನಿಯಾ-3 ಚಮಚ, ಮೆಣಸಿನಕಾಳು-11/2 ಚಮಚ, ಜೀರಿಗೆ-1 ಚಮಚ, ಮೆಂತ್ಯ-1/4 ಚಮಚ, ಸಾಸಿವೆ- ¼ ಚಮಚ, ಬ್ಯಾಡಗಿ ಮೆಣಸು- 12, ಅರಶಿನಪುಡಿ, ಉಪ್ಪು, ಹುಣಸೆಹಣ್ಣು ಸ್ವಲ್ಪ, ಗರಂಮಸಾಲ.
ಮಾಡುವ ವಿಧಾನ:
ಮೊದಲಿಗೆ ಧನಿಯಾ, ಮೆಣಸಿನಕಾಳು, ಜೀರಿಗೆ, ಮೆಂತ್ಯ, ಸಾಸಿವೆ, ಬ್ಯಾಡಗಿ ಮೆಣಸನ್ನು ಬೇರೆ ಬೇರೆಯಾಗಿ ಹುರಿದು ಮಿಕ್ಸಿಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ಅರಶಿನ ಹಾಕಿ ಪುಡಿಮಾಡಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಮರುವಾಯಿ, ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸು, ಟೊಮೆಟೊ, ತೆಂಗಿನಕಾಯಿ ತುರಿ, ಉಪ್ಪು ರುಚಿಗೆ ತಕ್ಕಷ್ಟು, ಸ್ವಲ್ಪ ಅರಶಿನ, ಗರಂಮಸಾಲ, ಮಾಡಿಟ್ಟುಕೊಂಡ ಪುಡಿ (ಖಾರ ಎಷ್ಟು ಬೇಕೋ ಅಷ್ಟು ಪುಡಿ) ಹಾಕಿಕೊಳ್ಳಿ. ನಂತರ ಅವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಮೇಲೆ ಇಟ್ಟು ಬೇಯಿಸಿ. ಕುದಿಯುತ್ತಿರುವಾಗ ಉಪ್ಪು, ಹುಳಿ(ಹುಣಸೆಹಣ್ಣಿನರಸ), ಖಾರ ನೋಡಿ ಕಡಿಮೆಯಾದಲ್ಲಿ ಹಾಕಿಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ