IND vs ENG: 100 ನೇ ಟೆಸ್ಟ್ ನಲ್ಲಿ ರವಿಚಂದ್ರನ್ ಅಶ್ವಿನ್ ಕಮಾಲ್

Krishnaveni K

ಶನಿವಾರ, 9 ಮಾರ್ಚ್ 2024 (11:47 IST)
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 5 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿದೆ. 100 ನೇ ಪಂದ್ಯವಾಡುತ್ತಿರುವ ರವಿಚಂದ್ರನ್ ಅಶ್ವಿನ್ ಕಮಾಲ್ ಮಾಡಿದ್ದಾರೆ.

ಭಾರತ ಮೊದಲ ಇನಿಂಗ್ಸ್ ನಲ್ಲಿ 477 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 259 ರನ್ ಗಳ ಬೃಹತ್ ಮುನ್ನಡೆ ಪಡೆಯಿತು. ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಗೆ ಆರಂಭದಲ್ಲೇ ರವಿಚಂದ್ರನ್ ಅಶ್ವಿನ್ ಆಘಾತವಿಕ್ಕಿದರು. ಬೆನ್ ಡಕೆಟ್ ರನ್ನು ಕೇವಲ 2 ರನ್ ಗೆ ಪೆವಿಲಿಯನ್ ಗಟ್ಟಿದರು.

ಅದಾದ ಬಳಿಕ ಝಾಕ್ ಕ್ರಾವ್ಲೇ ಕೂಡಾ ಶೂನ್ಯಕ್ಕೇ ಪೆವಿಲಿಯನ್ ಸೇರಿಕೊಂಡರು. ಆರಂಭಿಕರಿಬ್ಬರನ್ನೂ ಪೆವಿಲಿಯನ್ ಗಟ್ಟಿದ ಅಶ್ವಿನ್ ಬಳಿಕ 19 ರನ್ ಗಳಿಸಿದ್ದ ಒಲಿ ಪಾಪ್ ವಿಕೆಟ್ ರನ್ನೂ ತಮ್ಮದಾಗಿಸಿಕೊಂಡರು. ಆದರೆ ಇನ್ನೊಂದೆಡೆ ಬಿರುಸಿನ ಆಟವಾಡುತ್ತಿದ್ದ ಜಾನಿ ಬೇರ್ ಸ್ಟೋ ವಿಕೆಟ್ ನ್ನು ಕುಲದೀಪ್ ಉಡಾಯಿಸಿದರು. 100 ನೇ ಟೆಸ್ಟ್ ಪಂದ್ಯವಾಡುತ್ತಿರುವ ಬೇರ್ ಸ್ಟೋ 31 ಎಸೆತಗಳಿಂದ 39 ರನ್ ಗಳಿಸಿ ಔಟಾದರು. ಕೊನೆಯದಾಗಿ ಬೆನ್ ಸ್ಟೋಕ್ ರನ್ನು ಅಶ್ವಿನ್ ಔಟ್ ಮಾಡುವುದರೊಂದಿಗೆ ತಮ್ಮ ನಾಲ್ಕನೇ ಬಲಿ ಪಡೆದರು. ಇದೀಗ ಮತ್ತೊಂದು ಐದು ವಿಕೆಟ್ ಗಳ ಗೊಂಚಲಿನ ಸನಿಹವಿದ್ದಾರೆ.

ಆದರೆ ಅನುಭವಿ ಜೋ ರೂಟ್ ಮಾತ್ರ ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದಂತೆ ರಕ್ಷಣಾತ್ಮಕ ಆಟದ ಮೂಲಕ ಬಂಡೆಯಂತೆ ನಿಂತಿದ್ದಾರೆ. ಇದುವರೆಗೆ 52 ಎಸೆತ ಎದುರಿಸಿದ ಅವರು 34 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಆದರೆ ಇಂಗ್ಲೆಂಡ್ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲೇ ಇನ್ನೂ 156 ರನ್ ಗಳಿಸಬೇಕಿದೆ. ಇನ್ನು, ಗೆಲುವಿನ ಗುರಿ ನೀಡುವುದು ದೂರದ ಮಾತು.  ಸದ್ಯದ ಪರಿಸ್ಥಿತಿ ನೋಡಿದರೆ ಪಂದ್ಯ ಇಂದೇ ಮುಗಿದು ಭಾರತ ಇನಿಂಗ್ಸ್ ಅಂತರದ ಗೆಲುವು ಸಾಧಿಸುವ ಲಕ್ಷಣ ಕಾಣುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ