ಸ್ವಲ್ಪ ಬುದ್ಧಿ ಉಪಯೋಗಿಸಿ ಮಾತನಾಡಿ: ಪತ್ರಿಕಾಗೋಷ್ಠಿಯಲ್ಲಿ ಸಿಟ್ಟಿಗೆದ್ದ ರೋಹಿತ್ ಶರ್ಮಾ

Krishnaveni K

ಗುರುವಾರ, 27 ಜೂನ್ 2024 (14:44 IST)
ಗಯಾನ: ಇತ್ತೀಚೆಗೆ ಟೀಂ ಇಂಡಿಯಾ ಮೇಲೆ ಟಿ20 ವಿಶ್ವಕಪ್ ಪಂದ್ಯದಲ್ಲಿ ಚೆಂಡು ವಿರೂಪ ಆರೋಪ ಮಾಡಿದ್ದ ಪಾಕಿಸ್ತಾನ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸರಿಯಾಗಿ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಸೂಪರ್ 8 ಪಂದ್ಯವನ್ನು ಟೀಂ ಇಂಡಿಯಾ ಮೋಸದಿಂದ ಗೆದ್ದಿದೆ. ಈ ಪಂದ್ಯದಲ್ಲಿ 15 ನೇ ಓವರ್ ನಲ್ಲೂ ಬಾಲ್ ರಿವರ್ಸ್ ಸ್ವಿಂಗ್ ಆಗುತ್ತಿತ್ತು. ಅರ್ಷ್ ದೀಪ್ ಸಿಂಗ್ 15 ನೇ ಓವರ್ ನಲ್ಲಿ ಬಾಲ್ ರಿವರ್ಸ್ ಸ್ವಿಂಗ್ ಮಾಡುತ್ತಿದ್ದಾರೆ ಎಂದರೆ ಅದು ನಾರ್ಮಲ್ ಸಂಗತಿ ಅಲ್ಲ. 12 ಅಥವಾ 13 ನೇ ಓವರ್ ನಲ್ಲಿಯೇ ಅದಕ್ಕೆ ತಕ್ಕ ಹಾಗೆ ಚೆಂಡು ಸಿದ್ಧಗೊಳಿಸಲಾಗಿದೆ. ಈ ರೀತಿ ಪಾಕಿಸ್ತಾನಕ್ಕೆ ಆಗಿದ್ದರೆ ಅದು ದೊಡ್ಡ ವಿಚಾರವಾಗುತ್ತಿತ್ತು. ಭಾರತ ಮೋಸದಿಂದ ಗೆದ್ದಿದೆ. ಅಂಪಾಯರ್ ಗಳು ಸ್ವಲ್ಪ ಕಣ್ಣು ಬಿಟ್ಟುಕೊಂಡು ಇಂತಹ ವಿಚಾರಗಳನ್ನು ಗಮನಿಸಬೇಕು’ ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದರು.

ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯಕ್ಕೆ ಮುನ್ನ ಮಾಧ್ಯಮಗಳು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಈ ವಿಚಾರವನ್ನು ಪ್ರಸ್ತಾಪಿಸಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ರೋಹಿತ್ ಖಡಕ್ ಉತ್ತರ ನೀಡಿದ್ದು, ಸ್ವಲ್ಪ ಬುದ್ಧಿ ಉಪಯೋಗಿಸಿ ಮಾತನಾಡಬೇಕು ಎಂದಿದ್ದಾರೆ.

‘ಇಂತಹ ಮಾತಿಗೆ ನಾನೇನೆಂದು ಉತ್ತರಿಸಲಿ? ಇದು ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ ಅಲ್ಲ. ನಾವು ಇಂಥಾ ಡ್ರೈ ಪಿಚ್ ನಲ್ಲಿ ಆಡುತ್ತಿದ್ದೇವೆ. ಬಾಲ್ ಸ್ವಿಂಗ್ ಆಗುವುದು ಸಹಜ. ಇದು ನಮಗೆ ಮಾತ್ರವಲ್ಲ, ಬೇರೆ ತಂಡಗಳಿಗೂ ಇದೇ ರೀತಿ ಆಗುತ್ತಿದೆ. ಮಾತನಾಡುವಾಗ ಸ್ವಲ್ಪ ಬುದ್ಧಿ ಇಟ್ಟುಕೊಂಡು ಮಾತನಾಡಲಿ’ ಎಂದು ರೋಹಿತ್ ಕೋಪದಿಂದಲೇ ಉತ್ತರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ