ಮಂಗಳೂರಿನ ಸ್ಪೆಶಲ್ ಬಿಸ್ಕೆಟ್ ರೊಟ್ಟಿ (ಕಚೋರಿ):

ಗುರುವಾರ, 14 ಡಿಸೆಂಬರ್ 2017 (19:27 IST)
ಉತ್ತರ ಭಾರತದಲ್ಲಿ ಕಚೋರಿ ಎಂದು ಹೆಸರುವಾಸಿಯಾಗಿರುವ ಈ ತಿಂಡಿ ದಕ್ಷಿಣ ಭಾರತದಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಬಿಸ್ಕೆಟ್ ರೊಟ್ಟಿ ಎಂದೇ ಜನಪ್ರಿಯವಾಗಿದೆ.

ಮಂಗಳೂರು ಬೋಂಡಾ, ಬನ್ಸ್, ಅವಲಕ್ಕಿ-ಚಟ್ನಿಯ ಹಾಗೆಯೇ ಇದು ಕೂಡಾ ಜನಪ್ರಿಯ. ಮಂಗಳೂರಿಗರು ಸಿಹಿ ಖಾರದಿಂದ ಕೂಡಿರುವ ಈ ತಿನಿಸನ್ನು ಬಹಳ ಇಷ್ಟಪಡುತ್ತಾರೆ. ನೋಡಲು ಪೂರಿಯಂತಿದ್ದು ಗರಿಗರಿಯಾಗಿರುವ ಈ ತಿನಿಸು ಬಹಳ ರುಚಿಯಾಗಿರುತ್ತದೆ. ಇದನ್ನು ಮಾಡುವುದು ಹೇಗೆಂದು ನೋಡಿ,
ಬೇಕಾಗುವ ಸಾಮಗ್ರಿಗಳು:
ಮೈದಾ - 1 ಕಪ್
ತುಪ್ಪ - 1/4 ಕಪ್
ರವೆ - 2-3 ಚಮಚ 
ಉಪ್ಪು - ರುಚಿಗೆ
ಎಣ್ಣೆ - ಕರಿಯಲು
 
ಹೂರಣ:
ಕಾಯಿತುರಿ - 1/2 ಕಪ್
ರವೆ - 4 ಚಮಚ
ಎಣ್ಣೆ - 2 ಚಮಚ 
ಜೀರಿಗೆ - 2 ಚಮಚ
ಸಾಸಿವೆ - 1 ಚಮಚ
ಇಂಗು - 1/4 ಚಮಚ
ಉಪ್ಪು - ರುಚಿಗೆ
ಖಾರದ ಪುಡಿ - 2 ಚಮಚ (ಅಗತ್ಯವಿರುವಷ್ಟು)
 
ಮಾಡುವ ವಿಧಾನ:
 
* ಒಂದು ಪಾತ್ರೆಯಲ್ಲಿ 1 ಕಪ್ ಮೈದಾವನ್ನು ತೆಗೆದುಕೊಳ್ಳಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ರವೆ ಮತ್ತು 3 ಚಮಚ ತುಪ್ಪವನ್ನು ಸೇರಿಸಿ. ಅಗತ್ಯವಿರುವಷ್ಟು ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಮಾಡಿ ಚೆನ್ನಾಗಿ ನಾದಿ 1 ಗಂಟೆ ಕಾಲ ಹಾಗೆಯೇ ಬಿಡಿ.
 
* ಈಗ ಹೂರಣವನ್ನು ರೆಡಿ ಮಾಡಿ. ಸಣ್ಣ ಉರಿಯಲ್ಲಿ ಬಾಣಲೆಯನ್ನು ಸ್ಟೌ ಮೇಲಿಡಿ. ಅದಕ್ಕೆ 2 ಚಮಚ ಎಣ್ಣೆಯನ್ನು ಹಾಕಿ. ಅದು ಸ್ವಲ್ಪ ಬಿಸಿಯಾದ ನಂತರ ಅದಕ್ಕೆ 1 ಚಮಚ ಸಾಸಿವೆ, 2 ಚಮಚ ಜೀರಿಗೆಯನ್ನು ಹಾಕಿ ಸಾಸಿವೆ ಸಿಡಿಯಲು ಪ್ರಾರಂಭಿಸಿದಾಗ 1/4 ಚಮಚ ಇಂಗು ಮತ್ತು 2 ಚಮಚ ಖಾರದ ಪುಡಿಯನ್ನು ಸೇರಿಸಿ ವಗ್ಗರಣೆ ಸಿದ್ಧ ಮಾಡಿ.
 
* ನಂತರ ಅದಕ್ಕೆ ಕಾಯಿತುರಿ ಮತ್ತು 4 ಚಮಚ ರವೆಯನ್ನು ಸೇರಿಸಿ 2 ನಿಮಿಷ ಕಾಲ ಹುರಿದುಕೊಂಡ ನಂತರ ಸ್ಟೌ ಆಫ್ ಮಾಡಿ. ಈ ಮಿಶ್ರಣವು ತಣ್ಣಗಾದ ಮೇಲೆ ಇದಕ್ಕೆ 1/4 ಕಪ್ ಸಕ್ಕರೆಯನ್ನು ಸೇರಿಸಿ.
 
* ಈ ಮೊದಲೇ ಕಲಸಿಟ್ಟ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿ ಮಧ್ಯಮ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಅದನ್ನು ಚಿಕ್ಕ ಪೂರಿಯ ಗಾತ್ರಕ್ಕೆ ಲಟ್ಟಿಸಿಕೊಂಡು ಅದರ ಒಳಗೆ ಹೂರಣವನ್ನು ತುಂಬಿ ಇನ್ನೊಮ್ಮೆ ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿದರೆ ಬಿಸ್ಕೆಟ್ ರೊಟ್ಟಿ ರೆಡಿಯಾಗುತ್ತದೆ.
 
ಹೀಗೆ ಹೆಚ್ಚು ಖಾರವೂ ಅಲ್ಲದ ಸಿಹಿಯೂ ಅಲ್ಲದ ಈ ತಿನಿಸು ಮಕ್ಕಳಿಗೂ ಇಷ್ಟವಾಗುತ್ತದೆ ಮತ್ತು ಮಾಡುವುದೂ ಸುಲಭ. ಹಾಗಾದರೆ ನೀವೂ ಇದನ್ನೊಮ್ಮೆ ಪ್ರಯತ್ನಿಸುತ್ತೀರಿ ಅಲ್ಲವೇ...!!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ